ಹಾವೇರಿ: 2 ವಾರಗಳಿಂದ ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಗ್ರಾಮಸ್ಥರು ಮಾಡಿದ್ದೇನು ನೋಡಿ!
ಹಾವೇರಿ ಜಿಲ್ಲೆಯ ಮಾರನಬೀಡ ಗ್ರಾಮದಲ್ಲಿ ಸರಣಿ ಮನೆ ಕಳ್ಳತನದ ಭೀತಿ ಹೆಚ್ಚಾಗಿದೆ. ಕಳೆದ ಎರಡು ವಾರಗಳಿಂದ ಕಳ್ಳರ ಹಾವಳಿಗೆ ಬೆಚ್ಚಿದ ಗ್ರಾಮಸ್ಥರು, ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ರಾತ್ರಿಯಿಡೀ ದೊಣ್ಣೆ ಹಿಡಿದು ಗಸ್ತು ತಿರುಗುತ್ತಿದ್ದಾರೆ. ಪೊಲೀಸರ ಸಹಾಯ ಸಿಗದ ಹಿನ್ನೆಲೆಯಲ್ಲಿ ತಮ್ಮ ಮನೆಗಳನ್ನು ತಾವೇ ಕಾಯ್ದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಹಾವೇರಿ, ಡಿಸೆಂಬರ್ 27: ಹಾವೇರಿ ಜಿಲ್ಲೆಯ ಮಾರನಬೀಡ ಗ್ರಾಮದಲ್ಲಿ ಮನೆ ಕಳ್ಳತನದ ಹಾವಳಿ ತೀವ್ರಗೊಂಡಿದೆ. ಕಳೆದ ಎರಡು ವಾರಗಳಿಂದ ಸರಣಿ ಕಳ್ಳತನಗಳು ವರದಿಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಇದರ ಪರಿಣಾಮವಾಗಿ, ಹಗಲಿನಲ್ಲಿ ಹೊಲಗಳಲ್ಲಿ ದುಡಿದು ಬಳಲಿದರೂ, ರಾತ್ರಿಯಿಡೀ ನಿದ್ದೆಗೆಟ್ಟು ತಮ್ಮ ಮನೆಗಳ ರಕ್ಷಣೆಗೆ ನಿಂತಿದ್ದಾರೆ. ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ, ಗ್ರಾಮಸ್ಥರು ದೊಣ್ಣೆ ಮತ್ತು ಕೋಲುಗಳನ್ನು ಹಿಡಿದು ಗ್ರಾಮದಾದ್ಯಂತ ಗಸ್ತು ತಿರುಗುತ್ತಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ನೆರವು ಸಿಗದ ಕಾರಣ, ತಮ್ಮ ಆಸ್ತಿಪಾಸ್ತಿಗಳನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ತಾವೇ ಗಸ್ತು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಹಾವೇರಿ ನಗರ, ನರೇಗಲ್ಲ ಮತ್ತು ತವರಮರಳಿಹಳ್ಳಿಗಳಲ್ಲೂ ಇದೇ ರೀತಿ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಕಳ್ಳರ ಕಾಟದಿಂದ ಭಯದಲ್ಲಿ ಜೀವಿಸುವಂತಾಗಿದ್ದು, ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತು ಭದ್ರತೆ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ
