ಕೋವಿಡ್ ಸಮಯದಲ್ಲಿ ಬೇಕಿದ್ವಿ, ಈಗ ಬೇಡವಾದ್ವಾ?; ಹಾಸನದಲ್ಲಿ ಗ್ರೂಪ್ ಡಿ ನೌಕರರ ಕಣ್ಣೀರು: 20 ಸ್ವಚ್ಛತಾ ಸಿಬ್ಬಂದಿ ಏಕಾಏಕಿ ವಜಾ

Edited By:

Updated on: Jun 23, 2026 | 9:44 PM

ಹಾಸನದ ಹೊಳೆನರಸೀಪುರ ತಾಲೂಕು ಆಸ್ಪತ್ರೆಯಲ್ಲಿ 20 ಸ್ವಚ್ಛತಾ ಗುತ್ತಿಗೆ ಸಿಬ್ಬಂದಿಯನ್ನು ಏಕಾಏಕಿ ವಜಾ ಮಾಡಿದ್ದನ್ನು ವಿರೋಧಿಸಿ ಉಳಿದ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸುರಕ್ಷಾ ಏಜೆನ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿಬ್ಬಂದಿ, ತಮಗೆ ಕೆಲಸಕ್ಕೆ ಬರಬೇಡಿ ಎಂದು ಬೆದರಿಕೆ ಹಾಕಲಾಗಿದೆ ಎಂದಿದ್ದಾರೆ. ಕೆಲಸ ಕಳೆದುಕೊಂಡವರು ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಹಾಸನ, ಜೂ.23: ಹೊಳೆನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ 20 ಸ್ವಚ್ಛತಾ ಸಿಬ್ಬಂದಿಯನ್ನು ಏಕಾಏಕಿ ವಜಾ ಮಾಡಲಾಗಿದ್ದು, ಇದನ್ನು ಖಂಡಿಸಿ ಉಳಿದ ಗುತ್ತಿಗೆ ಸಿಬ್ಬಂದಿ ಆಸ್ಪತ್ರೆ ಎದುರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಸುರಕ್ಷಾ ಏಜೆನ್ಸಿ ಎಂಬ ಸಂಸ್ಥೆಯು 20 ಸಿಬ್ಬಂದಿಯ ಪಟ್ಟಿ ಮಾಡಿ, ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದು ತಿಳಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಅಲ್ಲದೆ, ಕೆಲಸಕ್ಕೆ ಬಂದಲ್ಲಿ ಪೊಲೀಸರನ್ನು ಕರೆಸಿ ಓಡಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಸುಮಾರು 50 ಮಂದಿ ಗ್ರೂಪ್ ಡಿ ಸಿಬ್ಬಂದಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ 20 ಮಂದಿಯನ್ನು ತೆಗೆದುಹಾಕಲಾಗಿದೆ. ನಾಳೆ ಇನ್ನೂ 20 ಮಂದಿಯನ್ನು ವಜಾ ಮಾಡುವುದಿಲ್ಲ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ತೊಡಗಿರುವ ಸಿಬ್ಬಂದಿ, ಬೆಳಿಗ್ಗೆ 11 ಗಂಟೆಯಿಂದ ಊಟ ತಿಂಡಿ ಇಲ್ಲದೆ, ಮಳೆಯನ್ನೂ ಲೆಕ್ಕಿಸದೆ ಧರಣಿ ನಡೆಸುತ್ತಿದ್ದಾರೆ. ತಮ್ಮ ಶಾಸಕರು ಕೂಡ ತಮ್ಮ ನೆರವಿಗೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕೋವಿಡ್ ಸಮಯದಲ್ಲಿ ನಮಗೆ ಅಗತ್ಯವಿತ್ತು, ಈಗ ಬೇಡವಾಗಿದ್ದೇವೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯ ಸಿಗುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us