ಹೋಳಿ ಹುಣ್ಣಿಮೆಯಂದೇ ಸ್ಮಶಾನ ಮೌನವಾದ ಗ್ರಾಮ: ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು

Edited By:

Updated on: Mar 04, 2026 | 7:56 PM

ಹೋಳಿ ಹಬ್ಬದ ಸಂಭ್ರಮ ದುರಂತದಲ್ಲಿ ಅಂತ್ಯವಾಗಿದೆ. ಗಂಗಾವತಿಯಲ್ಲಿ ಇಬ್ಬರು ಯುವಕರು, ಅಭಿಷೇಕ್ ಮತ್ತು ಸೂರ್ಯ, ಹೋಳಿ ಬಣ್ಣ ತೊಳೆದುಕೊಳ್ಳಲು ಸಣಾಪುರ ಕೆರೆಗೆ ಇಳಿದು ನೀರುಪಾಲಾಗಿದ್ದಾರೆ. ನೀರಿನ ಆಳ ತಿಳಿಯದೆ ಸಂಭವಿಸಿದ ಈ ದುರ್ಘಟನೆ ಇಡೀ ಗಾಂಧಿನಗರವನ್ನು ಆಘಾತಕ್ಕೆ ದೂಡಿದೆ. ಮೃತದೇಹಗಳಿಗಾಗಿ ಶೋಧ ಮುಂದುವರಿದಿದ್ದು, ಪೊಲೀಸ್ ತನಿಖೆ ಜಾರಿಯಲ್ಲಿದೆ.

ಕೊಪ್ಪಳ,ಮಾ.4 : ಬಣ್ಣಗಳ ಹಬ್ಬ ಹೋಳಿ ಹುಣ್ಣಿಮೆಯನ್ನು ಸಡಗರದಿಂದ ಆಚರಿಸಿದ ಇಬ್ಬರು ಯುವಕರು, ಹಚ್ಚಿದ್ದ ಬಣ್ಣವನ್ನು ತೊಳೆದುಕೊಳ್ಳಲು ಕೆರೆಗೆ ಇಳಿದಾಗ ನೀರಿನ ಸುಳಿಗೆ ಸಿಲುಕಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಗಂಗಾವತಿ ತಾಲೂಕಿನ ಸಣಾಪುರ ಗ್ರಾಮದಲ್ಲಿ ನಡೆದಿದೆ. ಇನ್ನು ಮೃತ ಯುವಕರನ್ನು ಗಂಗಾವತಿ ನಗರದ ಗಾಂಧಿನಗರ ನಿವಾಸಿಗಳಾದ ಅಭಿಷೇಕ್ ಮತ್ತು ಸೂರ್ಯ ಎಂದು ಗುರುತಿಸಲಾಗಿದೆ. ಹೋಳಿ ಹಬ್ಬದ ಪ್ರಯುಕ್ತ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದ್ದ ಈ ಯುವಕರು, ಮಧ್ಯಾಹ್ನದ ನಂತರ ಸ್ನಾನ ಮಾಡಲು ಸಣಾಪುರ ಗ್ರಾಮದ ಕೆರೆಗೆ ತೆರಳಿದ್ದರು. ಕೆರೆಯಲ್ಲಿ ಈಜಲು ಇಳಿದಾಗ ನೀರಿನ ಆಳ ತಿಳಿಯದೆ ಇಬ್ಬರೂ ಮುಳುಗಿದ್ದಾರೆ. ಯುವಕರು ನೀರುಪಾಲಾಗುತ್ತಿದ್ದಂತೆಯೇ ಆತಂಕಗೊಂಡ ಸ್ಥಳೀಯರು ತಕ್ಷಣವೇ ಶೋಧ ಕಾರ್ಯ ಆರಂಭಿಸಿದ್ದಾರೆ. ಸದ್ಯ ಸಾಣಾಪುರ ಕೆರೆಯಲ್ಲಿ ಮೃತದೇಹಗಳಿಗಾಗಿ ಸ್ಥಳೀಯ ಈಜುಗಾರರ ಸಹಾಯದಿಂದ ಹುಡುಕಾಟ ಮುಂದುವರಿದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಬ್ಬದ ದಿನವೇ ಇಬ್ಬರು ಯುವಕರನ್ನು ಕಳೆದುಕೊಂಡ ಗಾಂಧಿನಗರದಲ್ಲಿ ಈಗ ಸ್ಮಶಾನ ಮೌನ ಆವರಿಸಿದ್ದು, ಪೋಷಕರ ಕ್ರಂದನ ಮುಗಿಲು ಮುಟ್ಟಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us
Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More