ಒಂದೇ ಓವರ್​ನಲ್ಲಿ 6 ಬೌಂಡರಿ ಬಾರಿಸಿದ ಧೋನಿ ಶಿಷ್ಯ; ವಿಡಿಯೋ ನೋಡಿ

|

Updated on: Jan 09, 2025 | 5:49 PM

Vijay Hazare Trophy: ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ತಮಿಳುನಾಡು ತಂಡದ ಎನ್. ಜಗದೀಶನ್ ಅವರು ರಾಜಸ್ಥಾನ ವಿರುದ್ಧ 52 ಎಸೆತಗಳಲ್ಲಿ 65 ರನ್​ಗಳ ಅದ್ಭುತ ಪ್ರದರ್ಶನ ನೀಡಿದರು. ತಮ್ಮ ಇನಿಂಗ್ಸ್‌ನಲ್ಲಿ 10 ಬೌಂಡರಿ ಬಾರಿಸಿದ ಅವರು ಒಂದೇ ಓವರ್‌ನಲ್ಲಿ ಆರು ಬೌಂಡರಿ ಬಾರಿಸಿದ್ದು ವಿಶೇಷವಾಗಿತ್ತು. ಆದಾಗ್ಯೂ, ತಮಿಳುನಾಡು ತಂಡ 19 ರನ್‌ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿತು.

ಐಪಿಎಲ್‌ನಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ ತಮಿಳುನಾಡಿನ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಎನ್ ಜಗದೀಸನ್ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದ್ದಾರೆ. ರಾಜಸ್ಥಾನ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಗದೀಸನ್ 52 ಎಸೆತಗಳಲ್ಲಿ 65 ರನ್‌ಗಳ ತ್ವರಿತ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 10 ಬೌಂಡರಿಗಳನ್ನು ಬಾರಿಸಿದರು. ಜಗದೀಸನ್ ಅವರ ಇನಿಂಗ್ಸ್‌ನ ವಿಶೇಷತೆ ಏನೆಂದರೆ, ಅವರು ಆರು ಎಸೆತಗಳಲ್ಲಿ 6 ಬೌಂಡರಿಗಳನ್ನು ಬಾರಿಸಿ 29 ರನ್ ಕಲೆಹಾಕಿದರು.

ವಿಜಯ್ ಹಜಾರೆ ಟ್ರೋಫಿಯ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡ ರಾಜಸ್ಥಾನ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಡೀ ರಾಜಸ್ಥಾನ ತಂಡ 267 ರನ್ ಕಲೆಹಾಕಿತು. ತಂಡದ ಪರವಾಗಿ ಅಭಿಜಿತ್ ತೋಮರ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 111 ರನ್​ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ನಾಯಕ ಮಹಿಪಾಲ್ ಲೊಮ್ರೋರ್ ಕೂಡ 49 ಎಸೆತಗಳಲ್ಲಿ 60 ರನ್‌ಗಳ ಪ್ರಬಲ ಇನ್ನಿಂಗ್ಸ್ ಆಡಿದರು. ಗುರಿ ಬೆನ್ನಟ್ಟಿದ ತಮಿಳುನಾಡಿಗೆ ತುಷಾರ್ ಮತ್ತು ಎನ್ ಜಗದೀಸನ್ ಭರ್ಜರಿ ಆರಂಭ ನೀಡಿದರು.

ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಅಬ್ಬರಿಸಿದ ಜಗದೀಶನ್, ರಾಜಸ್ಥಾನ ತಂಡದ ವೇಗಿ ಅಮನ್ ಸಿಂಗ್ ಎಸೆದ ಓವರ್​ನ 6 ಎಸೆತಗಳಲ್ಲಿ ಜಗದೀಶನ್ ಬೌಂಡರಿ ಬಾರಿಸಿದರು. ಈ ಮೂಲಕ ಒಂದೇ ಓವರ್​ನಲ್ಲಿ 29 ರನ್ ಕಲೆಹಾಕಿದರು. ಓವರ್​ನ ಮೊದಲ ಎಸೆತವನ್ನು ವೈಡ್ ಬೌಲ್ ಮಾಡುವ ಮೂಲಕ ಅಮನ್ ಸಿಂಗ್ ಬೌಂಡರಿ ಬಿಟ್ಟುಕೊಟ್ಟಿದ್ದರು. ಆ ಬಳಿಕ 6 ಎಸೆತಗಳನ್ನೂ ಜಗದೀಸನ್ ಬೌಂಡರಿಗಟ್ಟಿದರು.

ಆದಾಗ್ಯೂ ಜಗದೀಸನ್ ಅವರ ಸ್ಫೋಟಕ ಇನ್ನಿಂಗ್ಸ್​ನ ಹೊರತಾಗಿಯೂ ತಮಿಳುನಾಡು ತಂಡಕ್ಕೆ ರಾಜಸ್ಥಾನ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ರಾಜಸ್ಥಾನ ನೀಡಿದ 267 ರನ್​ಗಳ ಗುರಿಗೆ ಪ್ರತಿಯಾಗಿ ತಮಿಳುನಾಡು ತಂಡ 248 ರನ್​ಗಳಿಗೆ ಆಲೌಟ್ ಆಗುವ ಮೂಲಕ 19 ರನ್​ಗಳಿಂದ ಸೋಲನುಭವಿಸಿತು. ಇದರೊಂದಿಗೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಿಂದಲೂ ಹೊರಬಿದ್ದಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 09, 2025 05:47 PM