IND vs AUS: ಏನಾಯ್ತು ಕೊಹ್ಲಿ? ಬ್ಯಾಟಿಂಗ್​ನಲ್ಲಿ ರನ್ ಬರುತ್ತಿಲ್ಲ; ಇತ್ತ ಕ್ಯಾಚ್ ಕೂಡ ಹಿಡಿಯುತ್ತಿಲ್ಲ..!

|

Updated on: Nov 22, 2024 | 2:34 PM

Virat Kohli Drops Easiest Catch: ವಿರಾಟ್ ಕೊಹ್ಲಿ ಇತ್ತೀಚೆಗೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎರಡರಲ್ಲೂ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇದೀಗ ಸುಲಭ ಕ್ಯಾಚ್ ಕೈಚೆಲ್ಲಿರುವ ಕೊಹ್ಲಿ, ಮತ್ತೊಮ್ಮೆ ತಂಡವನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಕೊಹ್ಲಿಯ ಕಳಪೆ ಫಿಲ್ಡಿಂಗ್​ಗೆ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ವಿರಾಟ್ ಕೊಹ್ಲಿ… ಕ್ರಿಕೆಟ್ ಲೋಕದಲ್ಲಿ ಅನಭಿಶಕ್ತ ದೊರೆಯಾಗಿ ಮೆರೆಯುತ್ತಿರುವ ಈ ರನ್ ಸಾಮಾಟ್ರ, ಮುರಿಯದ ದಾಖಲೆಗಳಿಲ್ಲ, ನಿರ್ಮಿಸದ ದಾಖಲೆಗಳೂ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಆದ್ಯಾಕೋ ಕೊಹ್ಲಿ, ಕ್ರಿಕೆಟ್ ಮರೆತವರಂತೆ ವರ್ತಿಸುತ್ತಿದ್ದಾರೆ. ಕೊಹ್ಲಿ ಎಂದರೆ ನಮಗೆಲ್ಲ ಥಟ್ಟನೇ ನೆನಪಾಗುತ್ತಿದ್ದು, ಬ್ಯಾಟಿಂಗ್​ನಲ್ಲಿ ರನ್​ಗಳ ಗುಡ್ಡೆ ಹಾಕುವ, ಫೀಲ್ಡಿಂಗ್​ನಲ್ಲಿ ಚಿರತೆಯಂತೆ ಎಗರಿ ಅದ್ಭುತ ಕ್ಯಾಚ್​ಗಳನ್ನು ಹಿಡಿಯುವ ಅದ್ಭುತ ಫಿಲ್ಡರ್ ಆಗಿ. ಆದರೀಗ ಈ ಎರಡೂ ವಿಭಾಗಗಳಲ್ಲಿ ಕೊಹ್ಲಿಯ ವೈಫಲ್ಯ ಎದ್ದು ಕಾಣಿಸುತ್ತಿದೆ. ಬ್ಯಾಟಿಂಗ್​ನಲ್ಲಿ ರನ್ ಬರ ಎದುರಿಸುತ್ತಿರುವ ವಿರಾಟ್, ಇತ್ತೀಚೆಗೆ ಫೀಲ್ಡಿಂಗ್​ನಲ್ಲೂ ಹಲವು ಸುಲಭ ಕ್ಯಾಚ್​ಗಳನ್ನು ಕೈಚೆಲ್ಲಿ ತುಂಬಾ ದುಬಾರಿಯಾಗುತ್ತಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪರ್ತ್​ ಟೆಸ್ಟ್​ನಲ್ಲೂ ಕೊಹ್ಲಿಯ ಕಳಪೆ ಫೀಲ್ಡಿಂಗ್ ಮತ್ತೆ ಮುನ್ನೆಲೆಗೆ ಬಂದಿದೆ.

ಬುಮ್ರಾ ಮಾರಕ ದಾಳಿ

ವಾಸ್ತವವಾಗಿ ಕೇವಲ 150 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿರುವ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶಿಸುತ್ತಿದೆ. ನಾಯಕ ಬುಮ್ರಾ, ಕಾಂಗರೂ ಬ್ಯಾಟ್ಸ್‌ಮನ್​ಗಳನ್ನು ಒಬ್ಬೋಬ್ಬರಾಗಿ ಪೆವಿಲಿಯನ್​ಗಟ್ಟುತ್ತಿದ್ದಾರೆ. ಬುಮ್ರಾ ಪಂದ್ಯದ ಮೂರನೇ ಓವರ್‌ನ ಮೂರನೇ ಎಸೆತದಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ಮೆಕ್‌ಸ್ವೀನಿಯನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು.

ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಟೆಸ್ಟ್ ಸ್ಪೆಷಲಿಸ್ಟ್ ಮಾರ್ನಸ್ ಲಬುಶೇನ್ ಬ್ಯಾಟಿಂಗ್​ಗೆ ಇಳಿದರು. ಈ ವೇಳೆ ಅದೇ ಓವರ್​ನಲ್ಲಿ ಬುಮ್ರಾಗೆ ಎರಡನೇ ವಿಕೆಟ್ ಪಡೆಯುವ ಅವಕಾಶವಿತ್ತು. ಆದರೆ ಸ್ಲಿಪ್​ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಮಾಡಿದ ಎಡವಟ್ಟು, ವಿಕೆಟ್ ಸಿಗುವ ಅವಕಾಶವನ್ನು ಕಳೆದುಕೊಳ್ಳುವಂತೆ ಮಾಡಿತು.

ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ

ಮೂರನೇ ಓವರ್​ನ ಮೂರನೇ ಎಸೆತದಲ್ಲಿ ಮೆಕ್‌ಸ್ವೀನಿಯನ್ನು ಔಟ್ ಮಾಡಿದ ಬುಮ್ರಾ, ಅದೇ ಓವರ್​ನ ಐದನೇ ಎಸೆತವನ್ನು ಗುಡ್ ಲೆಂಗ್ತ್​ನಲ್ಲಿ ಆಫ್ ಸ್ಟಂಪ್ ಹೊರಗೆ ಬೌಲ್ ಮಾಡಿದರು. ಈ ಎಸೆತವನ್ನು ಡ್ರೈವ್ ಮಾಡಲು ಯತ್ನಿಸಿದ ಲಬುಶೇನ್, ಎರಡನೇ ಸ್ಲಿಪ್​ನಲ್ಲಿ ನಿಂತಿದ್ದ ಕೊಹ್ಲಿಗೆ ಸುಲಭ ಕ್ಯಾಚ್ ನೀಡಿದರು. ಈ ವೇಳೆ ಕೊಹ್ಲಿ ಕೂಡ ಉತ್ತಮವಾಗಿ ಕ್ಯಾಚ್ ತೆಗೆದುಕೊಂಡರು. ಆದರೆ ಆ ಕ್ಯಾಚನ್ನು ಪೂರ್ಣಗೊಳಿಸಲು ಕೊಹ್ಲಿಗೆ ಸಾಧ್ಯವಾಗಲಿಲ್ಲ. ಕೊಹ್ಲಿಯ ಮೊಣಕಾಲು ನೆಲಕ್ಕೆ ತಾಗುತ್ತಿದ್ದಂತೆ ಇತ್ತ, ಕೊಹ್ಲಿಯ ಕೈಸೇರಿದ್ದ ಚೆಂಡು ಕೂಡ ಕೈಯಿಂದ ಜಾರಿ ಕೆಳಗೆ ಬಿದ್ದಿತು. ಅಷ್ಟರಲ್ಲಾಗಲೇ ತಂಡದ ಆಟಗಾರರೆಲ್ಲರೂ ಸಂಭ್ರಮಿಸಲು ಶುರು ಮಾಡಿದ್ದರು. ಆದರೆ ಕೊಹ್ಲಿಯೇ, ಈ ಕ್ಯಾಚ್ ಕಂಪ್ಲಿಟ್ ಆಗಿಲ್ಲ ಎಂಬ ಸನ್ನೆಯನ್ನು ನೀಡುವ ಮೂಲಕ ಆಟಗಾರರಲ್ಲಿ ನಿರಾಸೆ ಮೂಡಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 22, 2024 02:28 PM