ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ

|

Updated on: Dec 23, 2024 | 1:57 PM

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ಗುರುವಾರದಿಂದ ಶುರುವಾಗಲಿದೆ. ಮೆಲ್ಬೋರ್ನ್​ನ ಎಂಸಿಜಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ಸರಣಿ ಸೋಲನ್ನು ತಪ್ಪಿಸಿಕೊಳ್ಳಬಹುದು. ಹೀಗಾಗಿ ಮೆಲ್ಬೋರ್ನ್​ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಬಾಕ್ಸಿಂಗ್​ ಡೇ ಟೆಸ್ಟ್​ಗಾಗಿ ಟೀಮ್ ಇಂಡಿಯಾ ಮೆಲ್ಬೋರ್ನ್​ನಲ್ಲಿ ಕಠಿಣ ತಾಲೀಮಿನಲ್ಲಿ ತೊಡಗಿಸಿಕೊಂಡಿದೆ. ಈ ತಾಲೀಮಿನ ನಡುವೆ ಭಾರತೀಯ ಆಟಗಾರರು ನಡೆಸಿದ ಫೀಲ್ಡಿಂಗ್ ಕಸರತ್ತಿನ ವಿಡಿಯೋವನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ವಿಭಿನ್ನ ಪೈಪೋಟಿ ಏರ್ಪಡಿಸಿದ್ದರು. ಇದಕ್ಕಾಗಿ ಭಾರತ ತಂಡದ ಆಟಗಾರರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಈ ಗ್ರೂಪ್​ ಮೂಲಕ ಥ್ರೋ ಅಭ್ಯಾಸ ನಡೆಸಲಾಗಿದ್ದು, ಈ ವೇಳೆ ಗೆಲ್ಲುವ ತಂಡಕ್ಕೆ 300 ಡಾಲರ್ ಬಹುಮಾನವಾಗಿ ನೀಡುವುದಾಗಿ ಫೀಲ್ಡಿಂಗ್ ಕೋಚ್ ತಿಳಿಸಿದ್ದರು.

ಗ್ರೂಪ್-1 ರಲ್ಲಿ ಸರ್ಫರಾಝ್ ಖಾನ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಅಭಿಮನ್ಯು ಈಶ್ವರನ್, ಹರ್ಷಿತ್ ರಾಣಾ ಮತ್ತು ಯಶಸ್ವಿ ಜೈಸ್ವಾಲ್ ಕಾಣಿಸಿಕೊಂಡಿದ್ದರು.

ಗ್ರೂಪ್-2 ರಲ್ಲಿ ಮೊಹಮ್ಮದ್ ಸಿರಾಜ್ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ರಿಷಬ್ ಪಂತ್, ಆಕಾಶ್ ದೀಪ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಕಾಣಿಸಿಕೊಂಡಿದ್ದರು.

ಗ್ರೂಪ್-3 ರಲ್ಲಿ ಧ್ರುವ್ ಜುರೇಲ್ (ನಾಯಕ), ಜಸ್​ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ರವೀಂದ್ರ ಜಡೇಜಾ, ಶುಭ್​ಮನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್ ಇದ್ದರು.

ಎಲ್ಲಾ ಮೂರು ತಂಡಗಳಿಗೆ ಮೂರು ಗುರಿಗಳನ್ನು ನೀಡಲಾಯಿತು. ಇದರಲ್ಲಿ ದೊಡ್ಡ ವಿಕೆಟ್‌ಗಳ ಮೇಲೆ ನೇರ ಎಸೆಗಳ ಮೂಲಕ ಹೊಡೆದರೆ ಒಂದು ಅಂಕ ನಿಗದಿ ಮಾಡಲಾಯಿತು. ಸಣ್ಣ ವಿಕೆಟ್‌ಗೆ ತಾಗಿಸಿದರೆ ಎರಡು ಅಂಕಗಳನ್ನು ಮತ್ತು ಮಧ್ಯೆ ಭಾಗದಲ್ಲಿದ್ದ ಚೆಂಡಿಗೆ ತಾಗಿಸಿದರೆ 4 ಅಂಕಗಳನ್ನು ನಿಗದಿ ಮಾಡಲಾಗಿತ್ತು. ಅದರಂತೆ ಅತೀ ಹೆಚ್ಚು ಅಂಕಗಳನ್ನು ಪಡೆಯುವ ತಂಡಕ್ಕೆ 300 ಡಾಲರ್ ನೀಡುವುದಾಗಿ ತಿಳಿಸಿದ್ದರು.

ಆದರೆ ಈ ಫೀಲ್ಡಿಂಗ್ ಪೈಪೋಟಿಯಲ್ಲಿ ಅನುಭವಿ ಆಟಗಾರರ ಬಳಗವನ್ನು ಹಿಂದಿಕ್ಕಿ ಧ್ರುವ್ ಜುರೇಲ್ ನೇತೃತ್ವದ ಗ್ರೂಪ್-3 ಅತ್ಯಧಿಕ ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ ಧ್ರುವ್ ಜುರೇಲ್ ನಾಯಕತ್ವದ ತಂಡ 25 ಸಾವಿರ ರೂ.ಗಳನ್ನು ಗೆದ್ದುಕೊಂಡಿದೆ. ಇದೀಗ ಟೀಮ್ ಇಂಡಿಯಾದ ಈ ಫೀಲ್ಡಿಂಗ್ ಅಭ್ಯಾಸದ ವಿಡಿಯೋ ವೈರಲ್ ಆಗಿದೆ.