IND vs PAK: ಪಾಕ್ ನಾಯಕನೊಂದಿಗೆ ವಿಶ್ವಕಪ್​ನಲ್ಲೂ ಕೈಕುಲುಕುದ ಸೂರ್ಯ

Updated on: Feb 15, 2026 | 7:31 PM

India vs Pakistan T20 World Cup 2026: ಭಾರತ-ಪಾಕಿಸ್ತಾನ ನಡುವಿನ 2026ರ T20 ವಿಶ್ವಕಪ್ ಪಂದ್ಯ ಕೊಲಂಬೊದಲ್ಲಿ ಆರಂಭವಾಗಿದೆ. ಸೂಪರ್ 8 ಪ್ರವೇಶಕ್ಕೆ ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ, ಅಭಿಮಾನಿಗಳ ನಿರೀಕ್ಷೆಗೆ ವಿರುದ್ಧವಾಗಿ ಭಾರತದ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನದ ಸಲ್ಮಾನ್ ಆಘಾ ಹ್ಯಾಂಡ್‌ಶೇಕ್ ಮಾಡಲಿಲ್ಲ. ಕಳೆದ ಏಷ್ಯಾಕಪ್‌ನಿಂದಲೂ ಮುಂದುವರಿದ ಈ ವಿವಾದ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳೇನು ಕಾದುನೋಡಬೇಕು.

2026 ರ ಟಿ20 ವಿಶ್ವಕಪ್‌ನ ಹೈ-ವೋಲ್ಟೇಜ್ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಆರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಅಂತಿಮವಾಗಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸೂಪರ್ 8 ಸುತ್ತಿಗೆ ಟಿಕೆಟ್ ಸಿಗಲಿದೆ. ಆದ್ದರಿಂದ, ಎರಡೂ ತಂಡಗಳು ಗೆಲುವಿಗಾಗಿ ನಾನಾ ತಂತ್ರಗಳೊಂದಿಗೆ ಅಖಾಡಕ್ಕಿಳಿದಿವೆ. ಆದಾಗ್ಯೂ ಇಷ್ಟು ದಿನ ಕಾಡುತ್ತಿದ್ದ ಪ್ರಶ್ನೆಗೆ ಈ ಪಂದ್ಯದ ಆರಂಭದೊಂದಿಗೆ ಉತ್ತರ ಸಿಕ್ಕಿದೆ. ವಾಸ್ತವವಾಗಿ ಇಂದಿನ ಪಂದ್ಯದಲ್ಲಾದರೂ ಉಭಯ ತಂಡಗಳ ನಾಯಕರು ಹ್ಯಾಂಡ್‌ಶೇಕ್ ಮಾಡುತ್ತಾರಾ ಎಂಬುದನ್ನು ನೋಡಲು ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ಈ ಪಂದ್ಯದಲ್ಲೂ ಅದು ನಡೆಯಲಿಲ್ಲ. ಅಂದರೆ ಉಭಯ ನಾಯಕರು ಹ್ಯಾಂಡ್‌ಶೇಕ್ ಮಾಡಲಿಲ್ಲ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತ್ತು. ಇದರಿಂದ ಭಾರತ ಮೊದಲು ಬ್ಯಾಟಿಂಗ್ ಮಾಡಬೇಕಾಗಿದೆ. ಟಾಸ್ ನಂತರ ಉಭಯ ನಾಯಕರು ಕೈಕುಲುಕುತ್ತಾರೆಯೇ? ಇಲ್ಲವೇ ಎಂಬುದರ ಮೇಲೆ ಎಲ್ಲರ ಗಮನವಿತ್ತು. ಆದರೆ ಟಾಸ್ ನಂತರ, ನಾಯಕ ಸಲ್ಮಾನ್ ಆಘಾ ತಮ್ಮ ನಿರ್ಧಾರ ತಿಳಿಸಿ ಹಾಗೆಯೇ ಹೊರಟು ಹೋದರೆ, ಇತ್ತ ನಾಯಕ ಸೂರ್ಯ ಕೂಡ ಪಾಕ್ ನಾಯಕನ ಕಡೆ ಕಣ್ಣೇತ್ತಿಯೂ ನೋಡಲಿಲ್ಲ.

ವಾಸ್ತವವಾಗಿ ಕಳೆದ ಬಾರಿಯ ಏಷ್ಯಾಕಪ್​ನಿಂದ ಭಾರತ ತಂಡ, ಪಾಕ್ ತಂಡದೊಂದಿಗೆ ಕೈಕುಲುಕುವುದನ್ನು ನಿಲ್ಲಿಸಿದೆ. ಅದರಂತೆ ಈ ಪಂದ್ಯದಲ್ಲೂ ನಾಯಕ ಸೂರ್ಯ, ಪಾಕ್ ನಾಯಕನೊಂದಿಗೆ ಹ್ಯಾಂಡ್‌ಶೇಕ್ ಮಾಡಲಿಲ್ಲ. ಏಷ್ಯಾಕಪ್‌ನ ಮೂರು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಹ್ಯಾಂಡ್‌ಶೇಕ್ ಮಾಡಿರಲಿಲ್ಲ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ಅದೇ ಘಟನೆ ಪುನರಾವರ್ತನೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.