ಪ್ರಧಾನ ಮಂತ್ರಿ ಸ್ಥಾನಕ್ಕೆ ಇಂಡಿಯ ಮೈತ್ರಿಕಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪವಾಗಿದ್ದು ಸಿದ್ದರಾಮಯ್ಯರ ಉತ್ಸಾಹ ಹೆಚ್ಚಿಸಿಲ್ಲ!

|

Updated on: Dec 22, 2023 | 2:34 PM

ಪ್ರಧಾನ ಮಂತ್ರಿ ಸ್ಥಾನದ ಅಭ್ಯರ್ಥಿ ಅಂತ ಇಂಡಿಯ ಮೈತ್ರಿಕೂಟದ ಕೆಲ ನಾಯಕರು ಮಾಡಿರುವ ಪ್ರಸ್ತಾಪದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಸಹ ಉತ್ಸಾಹವೇನೂ ತೋರಿಲ್ಲ. ಲೋಕಸಭ ಚುನಾವಣೆ ನಡೆದು ಇಂಡಿಯ ಮೈತ್ರಿಕೂಟಕ್ಕೆ ಬಹುಮತ ಸಿಕ್ಕ ಬಳಿಕ ಆ ಪ್ರಸ್ತಾಪ ಪ್ರಸ್ತುತವೆನಿಸುತ್ತದೆ ಎಂದು ವಾಸ್ತವವಾದಿಯಾಗಿ ಖರ್ಗೆ ಮಾತಾಡಿದ್ದರು.

ಮೈಸೂರು: ರಾಜ್ಯದ ಹಿರಿಯ ರಾಜಕಾರಣಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ದೇಶದ ಪ್ರಧಾನ ಮಂತ್ರಿಯಾದರೆ (Prime Minister) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಸಂತೋಷವಾಗುವುದಿಲ್ಲವೇ ಅಥವಾ ಖುದ್ದು ಖರ್ಗೆ ಅವರ ಹಾಗೆ ಸಿಎಂ ಕೂಡ ವಾಸ್ತವವಾದಿಯೇ? ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಇವತ್ತು ಮೈಸೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಖರ್ಗೆ ಅವರನ್ನು ಇಂಡಿಯಾ ಮೈತ್ರಿಕೂಟ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಪ್ರೊಜೆಕ್ಟ್ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಯವರ ಉತ್ತರ ನೀರಸವಾಗಿತ್ತು. ಅವರ ಹೆಸರನ್ನು ಮಮತಾ ಬ್ಯಾನರ್ಜೀ ಮತ್ತು ಅರವಿಂದ ಕೇಜ್ರಿವಾಲ್ ಪ್ರಸ್ತಾಪ ಮಾಡಿದ್ದಾರೆ ಅಷ್ಟೇ, ಆದರೆ ಅದು ಸಾಧ್ಯವಾಗಲು ತಾವೆಲ್ಲ ಬಹಳ ಶ್ರಮಿಸಬೇಕಿದೆ ಅಂತ ಅವರು ಹೇಳಿದರು. ಇಂಡಿಯಾ ಮೈತ್ರಿಕೂಟ ಮಮತಾ ಅವರ ಪ್ರಸ್ತಾಪವನ್ನು ಅನುಮೋದಿಸಬೇಕು ಮತ್ತ ಅದಕ್ಕಿಂತ ಮೊದಲು ಚುನಾವಣೆ ನಡೆದು ಮೈತ್ರಿಕೂಟ ಗೆಲ್ಲಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ