Vaibhav Suryavanshi: ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ

Updated on: Dec 26, 2025 | 7:10 PM

Bal Puraskar for Vaibhav Suryavanshi: ವೈಭವ್ ಸೂರ್ಯವಂಶಿ, 14 ವರ್ಷದ ಕ್ರಿಕೆಟ್ ಪ್ರತಿಭೆ, ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ವೀಕರಿಸಿದ್ದಾರೆ. ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ, ಅತಿ ಕಿರಿಯ ಆಟಗಾರ ಎಂಬ ದಾಖಲೆಗಳೊಂದಿಗೆ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ 190 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿರುವ ವೈಭವ್ ಸಾಧನೆಗೆ ಭಾರತ ಸರ್ಕಾರದಿಂದ ಮನ್ನಣೆ ದೊರೆತಿದೆ. ಈ ಪ್ರಶಸ್ತಿ ಅವರ ಅಸಾಧಾರಣ ಕ್ರಿಕೆಟ್ ಕೌಶಲ್ಯ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ.

ಕೇವಲ 14 ವರ್ಷ ವಯಸ್ಸಿನಲ್ಲೇ ಕ್ರಿಕೆಟ್‌ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿ ತಮ್ಮ ವೃತ್ತಿಜೀವನದ ಆರಂಭದ ಹಂತದಲ್ಲೇ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಕಿರಿಯನೆಂಬ ದಾಖಲೆಯಿಂದ ಹಿಡಿದು, ಇಂಗ್ಲೆಂಡ್‌, ಆಸ್ಟ್ರೇಲಿಯಾದಲ್ಲೂ ವೈಭವ್ ಆರ್ಭಟ ಜೋರಿತ್ತು. ಸಿಕ್ಕ ಅವಕಾಶಗಳನ್ನು ಎರಡು ಕೈಗಳಿಂದ ಬಾಚಿಕೊಂಡಿರುವ ವೈಭವ್​ಗೆ ಇದೀಗ ಭಾರತ ಸರ್ಕಾರದಿಂದಲೂ ಮನ್ನಣೆ ಸಿಕ್ಕಿದೆ. ವೈಭವ್ ಸೂರ್ಯವಂಶಿ ಅವರಿಗೆ ದೇಶದ ಅತ್ಯುನ್ನತ ಮಕ್ಕಳ ಪ್ರಶಸ್ತಿಯಾದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಿದ್ದಾರೆ.

ವಾಸ್ತವವಾಗಿ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ತಂಡದ ಪರ ಕಣಕ್ಕಿಳಿಯುತ್ತಿರುವ ವೈಭವ್ ಮೊದಲ ಪಂದ್ಯದಲ್ಲೇ 190 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಹೀಗಾಗಿ ಇಂದು ನಡೆದ ಎರಡನೇ ಪಂದ್ಯದಲ್ಲೂ ವೈಭವ್ ಆರ್ಭಟ ನೋಡಲು ಎಲ್ಲರೂ ಕಾದಿದ್ದರು. ಆದರೆ ಇಂದಿನ ಪಂದ್ಯದಲ್ಲಿ ವೈಭವ್ ಆಡಿರಲಿಲ್ಲ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಈ ಸಮಾರಂಭದಲ್ಲಿ ಪ್ರತಿ ವರ್ಷದಂತೆ, ಈ ವರ್ಷವೂ ದೇಶಾದ್ಯಂತದ ಅನೇಕ ಯುವಕರು ಮತ್ತು ಮಕ್ಕಳನ್ನು ಅವರ ಸಾಧನೆಗಳಿಗಾಗಿ, ಕೆಲವರು ಅವರ ಧೈರ್ಯಕ್ಕಾಗಿ, ಇತರರು ಕ್ರೀಡೆ, ಸಂಗೀತ ಅಥವಾ ವಿಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ ಗೌರವಿಸಲಾಯಿತು.

ಅದರಂತೆ ಬಿಹಾರದ ಸಮಷ್ಟಿಪುರದ ವೈಭವ್ ಅವರಿಗೆ ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಐಪಿಎಲ್‌ನಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಮತ್ತು ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಸಾಧನೆಗಾಗಿ ರಾಷ್ಟ್ರಪತಿ ಮುರ್ಮು ವೈಭವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 26, 2025 07:06 PM