ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ
England Women vs India Women, 3rd T20I: ಈ ಹಂತದಲ್ಲಿ ಕಣಕ್ಕಿಳಿದ ಅಲಿಸ್ ಕ್ಯಾಪ್ಸಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಟೀಮ್ ಇಂಡಿಯಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಕ್ಯಾಪ್ಟಿ ಮೈದಾನದ ಮೂಲೆ ಮೂಲೆಗೆ ಫೋರ್ಗಳನ್ನು ಬಾರಿಸಿದರು. ಕ್ಯಾಪ್ಟಿಗೆ ಉತ್ತಮ ಸಾಥ್ ನೀಡಿದ ಹೀದರ್ ನೈಟ್ ಕೂಡ ಅಬ್ಬರಿಸಲಾರಂಭಿಸಿದರು.
ಟೌಂಟನ್ನ ಕೂಪರ್ ಅಸೋಸಿಯೇಟ್ಸ್ ಕೌಂಟಿ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಸೋಲನುಭವಿಸಿದೆ. ಸರಣಿ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕಿ ಷಾರ್ಲೆಟ್ ಡೀನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ (8) ಹಾಗೂ ಶಫಾಲಿ ವರ್ಮಾ (11) ಪವರ್ಪ್ಲೇನಲ್ಲೇ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಬಂದ ಯಾಸ್ತಿಕಾ ಭಾಟಿಯಾ 18 ಎಸೆತಗಳಲ್ಲಿ 32 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಮತ್ತೊಂದೆಡೆ ಜೆಮಿಮಾ ರೊಡ್ರಿಗಸ್ 29 ರನ್ಗಳ ಕೊಡುಗೆ ನೀಡಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಹರ್ಮನ್ಪ್ರೀತ್ ಕೌರ್ 40 ಎಸೆತಗಳಲ್ಲಿ ಕಲೆಹಾಕಿದ್ದು 56 ರನ್ಗಳು ಮಾತ್ರ. ಹಾಗೆಯೇ 24 ಎಸೆತಗಳನ್ನು ಎದುರಿಸಿದ ದೀಪ್ತಿ ಶರ್ಮಾ ಗಳಿಸಿದ್ದು 32 ರನ್ಗಳು. ಈ ಇಬ್ಬರ ನಿಧಾನಗತಿಯ ಬ್ಯಾಟಿಂಗ್ ಹೊರತಾಗಿಯೂ ಟೀಮ್ ಇಂಡಿಯಾ 20 ಓವರ್ಗಳಲ್ಲಿ 180 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾಗಿದ್ದರು. 2ನೇ ಓವರ್ನಲ್ಲಿ ಕ್ರಾಂತಿ ಗೌಡ್, ವ್ಯಾಟ್ ಹಾಡ್ಜ್ (6) ವಿಕೆಟ್ ಉರುಳಿಸಿದರು. ಇದರ ಬೆನ್ನಲ್ಲೇ ಆರುಂಧತಿ ರೆಡ್ಡಿ ಸೋಫಿಯಾ ಡಂಕಿ (16) ವಿಕೆಟ್ ಕಬಳಿಸಿದರು. ಇನ್ನು ಆ್ಯಮಿ ಜೋನ್ಸ್ (3) ರನ್ನು ಬೇಗನೆ ಔಟ್ ಮಾಡುವಲ್ಲಿ ಕ್ರಾಂತಿ ಗೌಡ್ ಯಶಸ್ವಿಯಾದರು.
ಆದರೆ ಈ ಹಂತದಲ್ಲಿ ಕಣಕ್ಕಿಳಿದ ಅಲಿಸ್ ಕ್ಯಾಪ್ಸಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಟೀಮ್ ಇಂಡಿಯಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಕ್ಯಾಪ್ಟಿ ಮೈದಾನದ ಮೂಲೆ ಮೂಲೆಗೆ ಫೋರ್ಗಳನ್ನು ಬಾರಿಸಿದರು. ಕ್ಯಾಪ್ಟಿಗೆ ಉತ್ತಮ ಸಾಥ್ ನೀಡಿದ ಹೀದರ್ ನೈಟ್ ಕೂಡ ಅಬ್ಬರಿಸಲಾರಂಭಿಸಿದರು.
ಪರಿಣಾಮ ಅಲಿಸ್ ಕ್ಯಾಪ್ಸಿ ಬ್ಯಾಟ್ನಿಂದ ಕೇವಲ 43 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 82 ರನ್ಗಳು ಮೂಡಿಬಂತು ಇನ್ನು ಹೀದರ್ ನೈಟ್ 42 ಎಸೆತಗಳಲ್ಲಿ 70 ರನ್ ಚಚ್ಚಿದರು. ಈ ಮೂಲಕ ಇಂಗ್ಲೆಂಡ್ ತಂಡವು 18.4 ಓವರ್ಗಳಲ್ಲಿ 184 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಇಂಗ್ಲೆಂಡ್ ತಂಡವು ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
