World Cup 2025: ಟಾಸ್ ಸಮಯದಲ್ಲೇ ಪಾಕ್ ನಾಯಕಿಯಿಂದ ಮೋಸದಾಟ; ನೀವೇ ವಿಡಿಯೋ ನೋಡಿ

Updated on: Oct 05, 2025 | 5:03 PM

Women's ODI World Cup 2025: ಕೊಲಂಬೊದಲ್ಲಿ ನಡೆದ ಭಾರತ-ಪಾಕ್ ಮಹಿಳಾ ವಿಶ್ವಕಪ್ ಪಂದ್ಯದ ಟಾಸ್‌ನಲ್ಲಿ ವಿವಾದ ಭುಗಿಲೆದ್ದಿದೆ. ಪಾಕಿಸ್ತಾನಿ ನಾಯಕಿ ಫಾತಿಮಾ ಸನಾ 'ಟೈಲ್ಸ್' ಎಂದು ಕರೆದರೂ, ಮ್ಯಾಚ್ ರೆಫರಿ 'ಹೆಡ್ಸ್' ಎಂದು ಘೋಷಿಸಿ, ಪಾಕ್‌ಗೆ ಟಾಸ್ ನೀಡಿದರು. ಸನಾ ತಮ್ಮ ತಪ್ಪನ್ನು ತಿದ್ದಿಕೊಳ್ಳದೆ ಮೌನವಾಗಿದ್ದು ಮೋಸದಾಟಕ್ಕೆ ಕಾರಣವಾಗಿದೆ. ಹರ್ಮನ್‌ಪ್ರೀತ್ ಕೌರ್‌ಗೆ ಆದ ಅನ್ಯಾಯದ ವಿಡಿಯೋ ಈಗ ವೈರಲ್ ಆಗಿದೆ.

ಮಹಿಳಾ ವಿಶ್ವಕಪ್​ನ ಹೈವೋಲ್ಟೇಜ್ ಪಂದ್ಯ ಭಾರತ ಹಾಗೂ ಪಾಕಿಸ್ತಾನದ ನಡುವೆ ಕೊಲಂಬೊದಲ್ಲಿ ನಡೆಯುತ್ತಿದೆ. ನಿರೀಕ್ಷೆಯಂತೆಯೇ ಈ ಪಂದ್ಯದ ಟಾಸ್ ಸಮಯದಲ್ಲಿ ಉಭಯ ತಂಡಗಳ ನಾಯಕಿರುವ ಪರಸ್ಪರ ಹಸ್ತಲಾಘವ ಮಾಡದೆ ಪಂದ್ಯದ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಆದರೆ ಇದೇ ಟಾಸ್ ಸಮಯದಲ್ಲಿ ಪಾಕಿಸ್ತಾನದ ನಾಯಕಿ ಬಹಿರಂಗವಾಗಿಯೇ ಮೋಸದಾಟವನ್ನಾಡಿದ್ದಾರೆ. ಇದರಲ್ಲಿ ಮ್ಯಾಚ್ ರೆಫರಿಯ ತಪ್ಪಿದ್ದರೂ ಸಹ ತಾನು ತಪ್ಪು ಮಾಡುತ್ತಿದ್ದೇನೆ ಎಂದು ತಿಳಿದಿದ್ದರೂ ಕೂಡ ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಕೆಲಸ ಮಾಡಲಿಲ್ಲ.

ಅಕ್ಟೋಬರ್ 5 ರ ಭಾನುವಾರ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ನ ಆರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾದವು. ಟಾಸ್ ಸಮಯದಲ್ಲಿ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಪಾಕಿಸ್ತಾನಿ ನಾಯಕಿ ಫಾತಿಮಾ ಸನಾ ಕೈಕುಲುಕುತ್ತಾರೆಯೇ ಎಂಬುದರ ಮೇಲೆ ಎಲ್ಲರ ಕಣ್ಣುಗಳಿದ್ದವು. ಪುರುಷರ ಏಷ್ಯಾಕಪ್‌ನಲ್ಲಿ ಕಂಡುಬಂದಂತೆ, ಇಲ್ಲಿಯೂ ಅದೇ ಸಂಭವಿಸಿತು. ಟಾಸ್ ಸಮಯದಲ್ಲಿ ಉಭಯ ತಂಡಗಳ ನಾಯಕಿಯರು ಕೈಕುಲುಕಲಿಲ್ಲ.

ಆದರೆ ಇದೆಲ್ಲದರ ನಡುವೆ, ಭಾರತ ತಂಡದ ನಾಯಕಿ ಹರ್ಮನ್​​ಪ್ರೀತ್​ ಕೌರ್​ಗೆ ಮಹಾ ಮೋಸವಾಯಿತು. ಭಾರತದ ನಾಯಕಿ ಹರ್ಮನ್‌ಪ್ರೀತ್ ಸಿಂಗ್ ನಾಣ್ಯವನ್ನು ಚಿಮ್ಮಿಸಿದ ತಕ್ಷಣ, ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಟೈಲ್ಸ್‌ ಎಂದರು. ಇದು ಟಾಸ್ ಕ್ಯಾಮರಾದಲ್ಲೂ ಸ್ಪಷ್ಟವಾಗಿ ರೆಕಾರ್ಡ್​ ಕೂಡ ಆಗಿದೆ. ಆದರೆ ಅಲ್ಲಿ ಹಾಜರಿದ್ದ ಮ್ಯಾಚ್ ರೆಫರಿ ಶಾಂಡ್ರೆ ಫ್ರಿಟ್ಜ್, ಸನಾ ಹೆಡ್ಸ್‌ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು. ನಾಣ್ಯ ಬಿದ್ದ ತಕ್ಷಣ, ಫಲಿತಾಂಶ ಹೆಡ್ಸ್‌ ಎಂದು ಬಂದಿತು, ರೆಫರಿ ಪಾಕಿಸ್ತಾನವನ್ನು ಟಾಸ್ ವಿಜೇತ ಎಂದು ಘೋಷಿಸಿದರು.

ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಪಾಕಿಸ್ತಾನಿ ನಾಯಕಿ ತಾನು ಟೈಲ್ಸ್‌ ಎಂದು ಕರೆದಿದ್ದೇನೆಂದು ತಿಳಿದಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅವರು ಪ್ರಾಮಾಣಿಕರಾಗಿದ್ದರೆ, ಅವರು ಟೈಲ್ಸ್‌ ಎಂದು ಕರೆದಿದ್ದೇನೆ ಎಂದು ರೆಫರಿಗೆ ಹೇಳಬಹುದಿತ್ತು. ಆದರೆ ಅವರು ಇದ್ಯಾವುದನ್ನು ಮಾಡದೆ ನೇರವಾಗಿ ಟಾಸ್ ನಿರೂಪಕಿಯ ಬಳಿಗೆ ಹೋಗಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿರುವುದಾಗಿ ಹೇಳಿದರು. ಇದೀಗ ಪಾಕ್ ನಾಯಕಿಯ ಮೋಸದಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.