U19 World Cup 2026: ಪಾಕ್ ಬಳಿಕ ಬಾಂಗ್ಲಾ ಜೊತೆಗೆ ಶೇಕ್ ಹ್ಯಾಂಡ್ ಮಾಡದ ಟೀಂ ಇಂಡಿಯಾ
U19 World Cup 2026 controversy: ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಆಯುಷ್ ಮ್ಹಾತ್ರೆ ಬಾಂಗ್ಲಾದೇಶ ನಾಯಕನೊಂದಿಗೆ ಹ್ಯಾಂಡ್‌ಶೇಕ್ ನಿರಾಕರಿಸಿ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಹಿಂದಿನ ಘಟನೆಗೆ ಹೋಲಿಕೆಗಳೊಂದಿಗೆ, ಈ ವಿಡಿಯೋ ವೈರಲ್ ಆಗಿದೆ. ಬಿಸಿಸಿಐ ಮತ್ತು ಬಿಸಿಬಿ ನಡುವಿನ ಇತ್ತೀಚಿನ ಉದ್ವಿಗ್ನತೆಗಳು ಈ ಘಟನೆಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.
ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್ 2026 ರ ತನ್ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಎದುರಿಸಿತು. ಮಳೆ ಪೀಡಿತ ಈ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಆದಾಗ್ಯೂ ಟಾಸ್ ಸಮಯದಲ್ಲಿ ನಡೆದ ಅಚ್ಚರಿಯ ಘಟನೆ ಇದೀಗ ಕ್ರಿಕೆಟ್ ಲೋಕದಲ್ಲಿ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ. ನಡೆದಿದ್ದೇನೆಂದರೆ ಟಾಸ್ ಮುಗಿದ ಎರಡೂ ತಂಡಗಳ ನಾಯಕರು ಹ್ಯಾಂಡ್‌ಶೇಕ್ ಮಾಡಲಿಲ್ಲ. ಬಾಂಗ್ಲಾದೇಶ ನಾಯಕ ಕೈಕುಲುಕಲು ತಮ್ಮ ಕೈಯನ್ನು ಜೇಬಿನಿಂದ ಹೊರತೆಗೆದರಾದರೂ, ಟೀಂ ಇಂಡಿಯಾ ನಾಯಕ ಆಯುಷ್ ಮ್ಹಾತ್ರೆ ಮಾತ್ರ ಕೈಕುಲುಕಲದೆ ಹಿಂದೆ ಸರಿದರು. ಇದೀಗ ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ.
ವಾಸ್ತವವಾಗಿ ಕಳೆದ ವರ್ಷ ಅಂದರೆ 2025 ರ ಏಷ್ಯಾಕಪ್ ಸಮಯದಲ್ಲಿ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಅವರೊಂದಿಗೆ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದ್ದರು. ಈ ಘಟನೆ ವಿವಾದ ಹುಟ್ಟಿಕೊಳ್ಳಲು ಕಾರಣವಾಗಿತ್ತು. ಇದೀಗ ಆ ಪ್ರವೃತ್ತಿ ಬಾಂಗ್ಲಾದೇಶಕ್ಕೂ ಹರಡುತ್ತಿರುವಂತೆ ತೋರುತ್ತಿದೆ.
ಈ ಘಟನೆಯು ಬಿಸಿಸಿಐ ಮತ್ತು ಬಿಸಿಬಿ ನಡುವೆ ಇತ್ತೀಚೆಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ಇತ್ತೀಚೆಗೆ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಹೊರಹಾಕಿತ್ತು. ಇದರಿಂದ ಕೆರಳಿದ ಬಾಂಗ್ಲಾ ಕ್ರಿಕೆಟ್ ಮಂಡಳಿ ಭದ್ರತೆ ಮತ್ತು ಇತರ ಕಳವಳಗಳನ್ನು ಉಲ್ಲೇಖಿಸಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ತನ್ನ ತಂಡವನ್ನು ಕಳುಹಿಸಲು ಹಿಂದೇಟು ಹಾಕಿ ತನ್ನ ತಂಡದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂದು ವಿನಂತಿಸಿತ್ತು. ಈ ವಿವಾದದ ನಡುವೆ ಇದೀಗ ಮತ್ತೊಂದು ವಿವಾದ ಹುಟ್ಟಿಕೊಂಡಿದ್ದು ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ