Ranji Trophy Semifinal: ಸ್ಮರಣ್ ಶತಕ; ಬೃಹತ್​ ಮೊತ್ತದತ್ತ ಕರ್ನಾಟಕ

Updated on: Feb 16, 2026 | 4:08 PM

Smaran Ravichandran Ranji Century: ಕರ್ನಾಟಕ ತಂಡ ರಣಜಿ ಸೆಮಿಫೈನಲ್‌ನಲ್ಲಿ ಉತ್ತರಾಖಂಡ್ ವಿರುದ್ಧ ಭಾರಿ ಮೊತ್ತ ಗಳಿಸಿದೆ. ದೇವದತ್ ಪಡಿಕ್ಕಲ್ ದಾಖಲೆಯ ದ್ವಿಶತಕ, ರವಿಚಂದ್ರನ್ ಸ್ಮರಣ್ ಮತ್ತು ಕೆಎಲ್ ರಾಹುಲ್ ಶತಕಗಳ ಬಲದಿಂದ ಕರ್ನಾಟಕ 661/6 ರನ್ ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಎರಡನೇ ದಿನ ಪಡಿಕ್ಕಲ್ ಮತ್ತು ಸ್ಮರಣ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಭಾರಿ ಮುನ್ನಡೆ ತಂದುಕೊಟ್ಟಿದ್ದಾರೆ.

ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025-26ರ ರಣಜಿ ಟ್ರೋಫಿಯ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತರಾಖಂಡ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ ಬೃಹತ್ ಮೊತ್ತ ಕಲೆಹಾಕಿದೆ. ಮೊದಲ ದಿನ ತಂಡದ ಪರ ಎರಡು ಶತಕಗಳು ದಾಖಲಾದರೆ, ಎರಡನೇ ದಿನವೂ ಎರಡು ಶತಕಗಳು ಸಿಡಿದವು. ಮೊದಲ ದಿನ ಕೆಎಲ್ ರಾಹುಲ್ 141 ರನ್ ಬಾರಿಸಿದರೆ, ನಾಯಕ ದೇವದತ್ ಪಡಿಕ್ಕಲ್ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದರು. ಎರಡನೇ ದಿನ ಬ್ಯಾಟಿಂಗ್‌ ಮುಂದುವರೆಸಿದ ಪಡಿಕ್ಕಲ್ ದಾಖಲೆಯ ದ್ವಿಶತಕ ಬಾರಿಸಿದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸ್ಮರಣ್ ರವಿಚಂದ್ರನ್ ಕೂಡ ಸ್ಮರಣೀಯ ಶತಕ ಸಿಡಿಸಿದರು.

ಎರಡನೇ ದಿನದಾಟದಲ್ಲಿ ಕರುಣ್ ನಾಯರ್ ಔಟಾದ ಬಳಿಕ ಬ್ಯಾಟಿಂಗ್​ಗೆ ಬಂದ ಸ್ಮರಣ್, ನಾಯಕ ದೇವದತ್ ಪಡಿಕ್ಕಲ್ ಜೊತೆ ಸೇರಿ ಉತ್ತಮ ಜೊತೆಯಾಟ ಕಟ್ಟಿದರು. ಇವರಿಬ್ಬರು 59 ರನ್​ಗಳ ಜೊತೆಯಾಟ ಕಟ್ಟಿದರು. ನಾಯಕ ಪಡಿಕ್ಕಲ್ ಔಟಾದ ಬಳಿಕವೂ ತಮ್ಮ ತಾಳ್ಮೆಯ ಆಟವನ್ನು ಮುಂದುವರೆಸಿದ ಸ್ಮರಣ್ 85 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಆ ಬಳಿಕ 150 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ ಸ್ಮರಣ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದ 5ನೇ ಶತಕವನ್ನು ದಾಖಲಿಸಿದರು.

ಇದು ಈ ಆವೃತ್ತಿಯಲ್ಲಿ ಸ್ಮರಣ್ ಅವರ ಮೂರನೇ ಶತಕವಾಗಿದ್ದು, ಎರಡು ದ್ವಿಶತಕಗಳನ್ನು ಬಾರಿಸಿದ್ದಾರೆ. ಸ್ಮರಣ್ ಅವರ ಈ ಶತಕದಿಂದಾಗಿ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 600 ರನ್​ಗಳ ಗಡಿ ದಾಟಿದ್ದು, ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಈ ಸುದ್ದಿ ಬರೆಯುವ ಹೊತ್ತಿಗೆ ಕರ್ನಾಟಕ ತಂಡ ಎರಡನೇ ದಿನದಾಟದ ಟೀ ವಿರಾಮದ ವೇಳೆಗೆ 6 ವಿಕೆಟ್​ಗಳನ್ನು ಕಳೆದುಕೊಂಡು 661 ರನ್ ಕಲೆಹಾಕಿದೆ. ಸ್ಮರಣ್ 104 ರನ್​ಗಳೊಂದಿಗೆ ಬ್ಯಾಟಿಂಗ್‌ ಮುಂದುವರೆಸಿದ್ದಾರೆ.

Published on: Feb 16, 2026 04:07 PM