ಅರ್ಧಶತಕ ಬಾರಿಸಿ ಕ್ಲೀನ್ ಬೌಲ್ಡ್ ಆದ ರಾಹುಲ್; ವಿಡಿಯೋ

Updated on: Jan 30, 2026 | 9:23 PM

Ranji Trophy: ರಣಜಿ ಟ್ರೋಫಿಯಲ್ಲಿ ಪಂಜಾಬ್ ನೀಡಿದ 309 ರನ್‌ಗಳ ಗುರಿ ಬೆನ್ನಟ್ಟಿದ ಕರ್ನಾಟಕ, ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿದೆ. ಕೆಎಲ್ ರಾಹುಲ್ (59) ಹಾಗೂ ಮಯಾಂಕ್ ಅಗರ್ವಾಲ್ (46) ಶತಕದ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದರೂ, ಹರ್‌ಪ್ರೀತ್ ಬ್ರಾರ್ ಮಾರಕ ಬೌಲಿಂಗ್ (3 ವಿಕೆಟ್) ಮೂಲಕ ಕರ್ನಾಟಕದ ಟಾಪ್ ಆರ್ಡರ್‌ಗೆ ಆಘಾತ ನೀಡಿದರು. ರಾಹುಲ್ ಅರ್ಧಶತಕ ಬಾರಿಸಿದ ನಂತರ ಬ್ರಾರ್ ಬೌಲಿಂಗ್‌ನಲ್ಲಿ ಔಟಾದರು.

ರಣಜಿ ಟ್ರೋಫಿಯಲ್ಲಿ ಪಂಜಾಬ್ ಹಾಗೂ ಕರ್ನಾಟಕ ತಂಡಗಳು ಮುಖಾಮುಖಿಯಾಗಿವೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ಮೊದಲ ಇನ್ನಿಂಗ್ಸ್​ನಲ್ಲಿ 309 ರನ್​ ಕಲೆಹಾಕಿದೆ. ಇತ್ತ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 255 ರನ್ ಕಲೆಹಾಕಿದೆ. ತಂಡದ ಪರ ಕೆಎಲ್ ರಾಹುಲ್ ಅರ್ಧಶತಕದ ಇನ್ನಿಂಗ್ಸ್ ಆಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಆದಾಗ್ಯೂ ರಾಹುಲ್ ಅರ್ಧಶತಕ ಬಾರಿಸಿದ ಬೆನ್ನಲ್ಲೇ ಹರ್‌ಪ್ರೀತ್ ಬ್ರಾರ್ ಎಸೆದ ಅದ್ಭುತ ಚೆಂಡಿಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ತಮ್ಮ ಇನ್ನಿಂಗ್ಸ್ ಮುಗಿಸಿದರು.

ಔಟಾಗುವುದಕ್ಕೂ ಮುನ್ನ ಕರ್ನಾಟಕ ಪರ ಮೊದಲ ವಿಕೆಟ್‌ಗೆ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ 102 ರನ್​ಗಳ ಜೊತೆಯಾಟವನ್ನಾಡಿದರು. ಮಯಾಂಕ್ 64 ಎಸೆತಗಳಲ್ಲಿ 6 ಬೌಂಡರಿಗಳ ಸಹಾಯದಿಂದ 46 ರನ್ ಗಳಿಸಿ ಔಟಾದರೆ, ರಾಹುಲ್ 87 ಎಸೆತಗಳಲ್ಲಿ 59 ರನ್ ಬಾರಿಸಿ ಔಟಾದರು. ರಾಹುಲ್ ವಿಕೆಟ್ ಪಡೆದ ನಂತರ, ನಾಯಕ ದೇವದತ್ ಪಡಿಕ್ಕಲ್ (9) ಮತ್ತು ಸ್ಮ್ರಾನಾ ಆರ್ (9) ಅವರನ್ನು ಸಹ ಹರ್‌ಪ್ರೀತ್ ಬ್ರಾರ್ ಪೆವಿಲಿಯನ್​ಗೆ ವಾಪಸ್ ಕಳುಹಿಸಿದರು.

Published on: Jan 30, 2026 09:23 PM