ಹೊಸ ಶರ್ಟ್ ಕತ್ತರಿಸಲು ಹಿಂದೇಟು: ಬನಿಯನ್‌ನಲ್ಲೇ ಕೆಎಎಸ್ ಪರೀಕ್ಷೆ ಬರೆದ ಅಭ್ಯರ್ಥಿ
ಕೆಎಎಸ್ ಪರೀಕ್ಷೆಯಲ್ಲಿ ಉಡುಗೆ ನಿಯಮ ಉಲ್ಲಂಘನೆ ಘಟನೆ ವರದಿಯಾಗಿದೆ. ಅಭ್ಯರ್ಥಿಯೊಬ್ಬರು ತುಂಬುತೋಳಿನ ಶರ್ಟ್ ಧರಿಸಿದ್ದರಿಂದ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಶರ್ಟ್ ಕತ್ತರಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪದ ಅಭ್ಯರ್ಥಿ, ಶರ್ಟ್ ತೆಗೆದು ಬನಿಯನ್‌ನಲ್ಲೇ ಪರೀಕ್ಷೆ ಬರೆದಿದ್ದಾರೆ. ಮಲ್ಲೇಶ್ವರಂ ಸರ್ಕಾರಿ ಪದವಿ ಕಾಲೇಜು ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುತ್ತಿರುವ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬ ಬನಿಯನ್‌ನಲ್ಲೇ ಪರೀಕ್ಷೆ ಬರೆದಿರುವ ಘಟನೆ ನಡೆದಿದೆ. ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯ ಸಂದರ್ಭದಲ್ಲಿ ವಸ್ತ್ರಸಂಹಿತೆ ಹೆಸರಿನಲ್ಲಿ ದೃಷ್ಟಿಮಂದ ಅಭ್ಯರ್ಥಿಯೊಬ್ಬರಿಗೆ ವಿಚಿತ್ರ ಪರಿಸ್ಥಿತಿ ಎದುರಾಗಿದ್ದು, ಅವರು ಬನಿಯನ್‌ನಲ್ಲೇ ಪರೀಕ್ಷೆ ಬರೆದಿರುವ ಘಟನೆ ವರದಿಯಾಗಿದೆ. ಪರೀಕ್ಷೆಗೆ ಫುಲ್ ಶರ್ಟ್ ಧರಿಸಿ ಬಂದಿದ್ದ ಕಾರಣ ಸಿಬ್ಬಂದಿ ಅವರನ್ನು ತಡೆದಿದ್ದು, ಮುಂಗೈ ತೋಳಿನ ತನಕ ಬಟ್ಟೆ ಕತ್ತರಿಸಿಕೊಂಡು ಬರುವಂತೆ ಸೂಚಿಸಿದ್ದಾರೆ. ಆದರೆ ಹೊಸ ಶರ್ಟ್ ಕತ್ತರಿಸಿದರೆ ಮತ್ತೊಮ್ಮೆ ಅದನ್ನು ಬಳಸುವುದು ಕಷ್ಟವಾಗುತ್ತದೆ ಮತ್ತು ಕೊನೆ ಕ್ಷಣದಲ್ಲಿ ಬೇರೆ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ, ಅಭ್ಯರ್ಥಿ ಶರ್ಟನ್ನು ಕಳಚಿಟ್ಟು ಕೇವಲ ಬನಿಯನ್ ಧರಿಸಿಕೊಂಡೇ ಪರೀಕ್ಷೆಗೆ ಹಾಜರಾಗಿ ಬರೆದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
