KSRTC ಬಸ್​ ಚಾಲನೆ ವೇಳೆ ಮೊಬೈಲ್​ ಬಳಕೆ: ಚಾಲಕ ಅರೆಸ್ಟ್​

| Updated By: ವಿವೇಕ ಬಿರಾದಾರ

Updated on: Dec 11, 2024 | 10:57 AM

ಕೊಡಗಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ವೇಣುಗೋಪಾಲ್ ಮೊಬೈಲ್ ಬಳಸಿ ಚಾಲನೆ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊಬೈಲ್​ ಬಳಕೆಯನ್ನು ಪ್ರಯಾಣಿಕರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಚಾಲಕ ವೇಣುಗೋಪಾಲ್​​ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕೊಡಗು, ಡಿಸೆಂಬರ್​ 11: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC)ಯ ಬಸ್​ಗಳಲ್ಲಿ ನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವುದು ಚಾಕಲನ ಕರ್ತವ್ಯವಾಗಿದೆ. ಚಾಲನೆ ಸಮಯದಲ್ಲಿ ಚಾಲಕ ಮೊಬೈಲ್​ನಲ್ಲಿ ಮಾತನಾಡುವುದು, ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. ಆದರೂ ಕೂಡ ಪುತ್ತೂರು ಡಿಪೋ ಬಸ್​ ಚಾಲಕ ಮೊಬೈಲ್​ ಬಳಸುತ್ತಾ ಚಾಲನೆ ಮಾಡಿದ್ದಾರೆ.

ಚಾಲಕ ವೇಣುಗೋಪಾಲ್ ಬಸ್​ ಚಾಲನೆ ಮಾಡುತ್ತ ಮೊಬೈಲ್‌ ಬಳಕೆ ಮಾಡುತ್ತಿರುವ ವಿಡಿಯೋವನ್ನು ಪ್ರಯಾಣಿಕರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಬಸ್​​​ ಮಡಿಕೇರಿಯಿಂದ ಬಿರುನಾಣಿಗೆ ಹೋಗುತ್ತಿತ್ತು. ಚಾಲಕ ಮೊಬೈಲ್​ ಬಳಕೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೊಬೈಲ್​ ಬಳಕೆ ಮಾಡುತ್ತಿರುವುದನ್ನು ವಿಡಿಯೋ ಮಾಡಿದ ವಿಚಾರಕ್ಕೆ ನಿರ್ವಾಹಕ ರೂಪೇಶ್ ಜೊತೆ ಚಾಲಕ ವೇಣುಗೋಪಾಲ್​​ ಗಲಾಟೆ ಮಾಡಿದ್ದಾನೆ. ಬಳಿಕ, ಚಾಲಕ ವೇಣುಗೋಪಾಲ್ ಡಿಪೋ ಬಳಿ ಕೋವಿ ತಂದು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ರೂಪೇಶ್‌ನನ್ನು ಕೊಲೆ‌ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕೂಡಲೆ ಸಾರಿಗೆ ಸಂಸ್ಥೆ ಚಾಲಕ ವೇಣುಗೋಪಾಲ್​​ನನ್ನು ಅಮಾನತು ಮಾಡಿದೆ. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ. ಪೊಲೀಸರು ಆರೋಪಿ ವೇಣುಗೋಪಾಲ್​ನನ್ನು ಬಂಧಿಸಿದ್ದಾರೆ. ಚಾಲಕ ವೇಣುಗೋಪಾಲ್ ವಿರುದ್ಧ ಈ ಹಿಂದೆಯೂ ಹಲವು ಬಾರಿ ಮೊಬೈಲ್‌ ಬಳಸಿದ್ದ ಆರೋಪ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ