ಚಿನ್ನದ ನಿಧಿಯಿಂದ ಲಕ್ಕುಂಡಿ ಗ್ರಾಮಸ್ಥರಿಗೆ ಮತ್ತೊಂದು ಸಂಕಷ್ಟ: ದೇವಾಲಯಗಳ ಮೇಲೆ ನಿಧಿಗಳ್ಳರ ಕಣ್ಣು

Edited By:

Updated on: Jan 15, 2026 | 11:19 AM

ಐತಿಹಾಸಿಕ ಲಕ್ಕುಂಡಿ ಗ್ರಾಮದ ಪುರಾತನ ದೇವಾಲಯಗಳ ಮೇಲೆ ನಿಧಿಗಳ್ಳರ ಹಾವಳಿ ಹೆಚ್ಚಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿದೆ. ಇತ್ತೀಚೆಗೆ ನಿಧಿ ಪತ್ತೆಯಾದ ನಂತರ, ಪ್ರಾಚೀನ ದೇವಾಲಯಗಳಿಗೆ ರಕ್ಷಣೆ ನೀಡುವಂತೆ ಮತ್ತು ಜಿಲ್ಲಾಡಳಿತ ಭದ್ರತೆ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ನಿಧಿಗಳ್ಳರ ಅಕ್ರಮ ಚಟುವಟಿಕೆಗಳು ದೇವಾಲಯಗಳ ಅವನತಿಗೆ ಕಾರಣವಾಗಬಹುದೆಂಬ ಭಯ ವ್ಯಕ್ತವಾಗಿದೆ.

ಗದಗ, ಜ.15: ಐತಿಹಾಸಿಕ ದೇವಾಲಯಗಳ ತವರೂರಾದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಈಗ ನಿಧಿಯ ಚರ್ಚೆ ತೀವ್ರಗೊಂಡಿದೆ. ನಿಧಿಗಳ್ಳರ ಹಾವಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಪುರಾತನ ದೇವಾಲಯಗಳಿಗೆ ಭದ್ರತೆ ನೀಡುವಂತೆ ಒತ್ತಾಯಿಸಿದ್ದಾರೆ. ಈ ಹಿಂದೆ ಲಕ್ಕುಂಡಿ ಹೊರವಲಯದ ಗೋಣಿ ಬಸವೇಶ್ವರ ದೇವಸ್ಥಾನದಲ್ಲಿ ನಿಧಿಗಳ್ಳರು ಬಸವಣ್ಣನ ಮೂರ್ತಿಯ ಪಕ್ಕದಲ್ಲಿ ಸುಮಾರು ಆರು-ಏಳು ಅಡಿ ಆಳದಷ್ಟು ಅಗೆದು ನಿಧಿ ಹುಡುಕಲು ಯತ್ನಿಸಿದ್ದರು. ನಿಂಬೆಹಣ್ಣು ಸೇರಿದಂತೆ ಮಾಟ-ಮಂತ್ರದ ವಸ್ತುಗಳನ್ನು ಬಳಸಿ ನಿಧಿ ಅಗೆದಿದ್ದ ಪ್ರಕರಣಗಳು ವರದಿಯಾಗಿದ್ದವು. ಇದೇ ದೇವಸ್ಥಾನದಲ್ಲಿ ಎರಡು-ಮೂರು ಬಾರಿ ಈ ರೀತಿಯ ಕೃತ್ಯ ನಡೆದಿದ್ದು, ನಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ರಿತ್ತಿ ಕುಟುಂಬದ ಮನೆಯಲ್ಲಿ ನಿಧಿ ಪತ್ತೆಯಾದ ನಂತರ, ನಿಧಿಗಳ್ಳರ ಕಣ್ಣು ಮತ್ತೆ ಗ್ರಾಮದ ಎಲ್ಲಾ ಪುರಾತನ ದೇವಾಲಯಗಳ ಮೇಲೆ ಬಿದ್ದಿದೆ ಎಂಬ ಸುದ್ದಿ ಹಬ್ಬಿದೆ. ಲಕ್ಕುಂಡಿಯಲ್ಲಿ ಎಲ್ಲಿ ಅಗೆದರೂ ಚಿನ್ನ ಸಿಗುತ್ತದೆ ಎಂಬ ನಂಬಿಕೆ ಇರುವುದರಿಂದ, ದೇವಸ್ಥಾನಗಳಲ್ಲಿ ಯಥೇಚ್ಛವಾಗಿ ನಿಧಿ ಇದೆ ಎಂದು ನಿಧಿಗಳ್ಳರು ನಂಬಿದ್ದಾರೆ. ಇದರಿಂದ ಪುರಾತನ ದೇವಾಲಯಗಳ ಅವನತಿಯ ಆತಂಕ ಎದುರಾಗಿದ್ದು, ಜಿಲ್ಲಾಡಳಿತವು ದೇವಾಲಯಗಳಿಗೆ ಕಟ್ಟುನಿಟ್ಟಿನ ಭದ್ರತೆ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 15, 2026 11:18 AM