ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ! ಎಲ್ಲವೂ ಸುಟ್ಟು ಭಸ್ಮ

Edited By:

Updated on: Feb 21, 2026 | 5:51 PM

ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ಪ್ರೇಮ ವಿವಾಹಕ್ಕೆ ಆಕ್ರೋಶಗೊಂಡ ಮಾವನೊಬ್ಬ ಅಳಿಯನ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ವಿನೋದ್ ಮತ್ತು ಕಾವ್ಯಾ ಮದುವೆಯಾಗಿದ್ದಕ್ಕೆ ತೀವ್ರ ಕೋಪಗೊಂಡ ಕಾವ್ಯಾ ತಂದೆ ಚನ್ನೇಗೌಡ ಈ ಕೃತ್ಯ ಎಸಗಿದ್ದಾರೆ. ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಮತ್ತು ಇತರೆ ವಸ್ತುಗಳು ಸುಟ್ಟು ಹೋಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮಂಡ್ಯ, ಫೆ.21: ಪ್ರೀತಿಸಿ ಮದುವೆಯಾದ ಅಳಿಯನ ಮೇಲೆ ಕೋಪಗೊಂಡ ಮಾವನೊಬ್ಬ ಅಳಿಯನ ಮನೆಗೇ ಬೆಂಕಿ ಹಚ್ಚಿರುವ ಘಟನೆ ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದೆ. ಚುಂಚಗಹಳ್ಳಿ ಗ್ರಾಮದ ವಿನೋದ್ ಮತ್ತು ಕಾವ್ಯಾ ಎಂಬುವರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಕಾವ್ಯಾ ಮನೆಯಲ್ಲಿ ತೀವ್ರ ವಿರೋಧವಿತ್ತು. ಮನೆಯವರ ವಿರೋಧದ ನಡುವೆಯೂ ಈ ಜೋಡಿ ಕಳೆದ ಗುರುವಾರ ಮದುವೆಯಾಗಿತ್ತು. ತನ್ನ ಮಗಳು ವಿರೋಧದ ನಡುವೆ ಮದುವೆಯಾಗಿದ್ದರಿಂದ ಕಾವ್ಯಾ ತಂದೆ ಚನ್ನೇಗೌಡ ತೀವ್ರ ಆಕ್ರೋಶಗೊಂಡಿದ್ದರು. ಇದೇ ಕೋಪದಲ್ಲಿ ಇಂದು (ಶನಿವಾರ) ಬೆಳಿಗ್ಗೆ ಅಳಿಯ ವಿನೋದ್ ಮನೆಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆಬರೆ ಹಾಗೂ ಅಡುಗೆ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಘಟನೆ ನಡೆದ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಮನೆಗೆ ಬೆಂಕಿ ಹಚ್ಚುವ ಭರದಲ್ಲಿ ಆರೋಪಿ ಚನ್ನೇಗೌಡನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Prashantha B

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More