ರಾಯಗಢದ ತಮ್ಹಿನಿ ಘಾಟ್​​ನಿಂದ ಬಿದ್ದ ಕಾರು; ಪ್ರವಾಸಕ್ಕೆ ಬಂದಿದ್ದ 6 ಯುವಕರು ಸಾವು

Updated on: Nov 20, 2025 | 10:13 PM

ನವೆಂಬರ್ 17 ಮತ್ತು 18ರ ಮಧ್ಯರಾತ್ರಿ ರಾಯಗಢದ ತಮ್ಹಿನಿ ಘಾಟ್ ನಲ್ಲಿ ಥಾರ್ ಎಸ್​ಯುವಿ ಕಾರು ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ ಪ್ರವಾಸಕ್ಕೆ ತೆರಳಿದ್ದ 6 ಯುವಕರು ಮೃತಪಟ್ಟಿದ್ದಾರೆ. ಕೊನೆಗೆ ಇಂದು ಬೆಳಗ್ಗೆ ಪೊಲೀಸರು ಮತ್ತು ರಕ್ಷಣಾ ತಂಡಗಳು ಡ್ರೋನ್‌ಗಳು ಮತ್ತು ಹಗ್ಗಗಳನ್ನು ಬಳಸಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಈಗಾಗಲೇ ಒಬ್ಬ ಪ್ರವಾಸಿಗನ ಮೃತದೇಹ ಪತ್ತೆಯಾಗಿದ್ದು, ಇನ್ನೂ ಐವರ ಶವಗಳಿಗಾಗಿ ಹುಡುಕಾಟ ನಡೆಯುತ್ತಿದೆ.

ರಾಯಗಢ, ನವೆಂಬರ್ 20: ಮಹಾರಾಷ್ಟ್ರದ (Maharashtra) ಪುಣೆ-ಮಂಗಾವ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಯಗಢದ ತಮ್ಹಿನಿ ಘಾಟ್ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಥಾರ್ ಕಾರು 500 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ, ಕಣಿವೆಗೆ ಬಿದ್ದಿದ್ದ 6 ಜನರು ಸಾವನ್ನಪ್ಪಿದ್ದಾರೆ. ಮಂಗಳವಾರ ಯುವಕರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆ ಯುವಕರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.

ಈ ಅಪಘಾತ ಸಂಭವಿಸಿದಾಗ ಯುವಕರು ಕೊಂಕಣಕ್ಕೆ ಪ್ರವಾಸಕ್ಕೆ ತೆರಳಿದ್ದರು. ಸೋಮವಾರ ರಾತ್ರಿ ರಾಯಗಢದ ಮಂಗಾವ್ ಬಳಿಯ ತಮ್ಹಿನಿ ಘಾಟ್‌ನಲ್ಲಿ 400 ಅಡಿಯ ಕಣಿವೆಗೆ ಕಾರು ಬಿದ್ದಿತ್ತು. ಅವರ ಮೊಬೈಲ್ ಲೊಕೇಷನ್ ಆಧರಿಸಿ ಪೊಲೀಸರು ಹುಡುಕಾಟ ಶುರು ಮಾಡಿದ್ದರು. ಕೊನೆಗೆ ಇಂದು ಬೆಳಗ್ಗೆ ಪೊಲೀಸರು ಮತ್ತು ರಕ್ಷಣಾ ತಂಡಗಳು ಡ್ರೋನ್‌ಗಳು ಮತ್ತು ಹಗ್ಗಗಳನ್ನು ಬಳಸಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಆಗ ಆ 6 ಯುವಕರಿದ್ದ ಕಾರು ಅಪಘಾತಕ್ಕೀಡಾಗಿರುವುದು ಪತ್ತೆಯಾಗಿದೆ. ಮೃತರೆಲ್ಲರೂ 20ರಿಂದ 25 ವರ್ಷದೊಳಗಿನವರು. ಈಗಾಗಲೇ ಒಬ್ಬ ಪ್ರವಾಸಿಗನ ಮೃತದೇಹ ಪತ್ತೆಯಾಗಿದ್ದು, ಇನ್ನೂ ಐವರ ಶವಗಳಿಗಾಗಿ ಹುಡುಕಾಟ ನಡೆಯುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ