ಮಾರ್ಗಶಿರ ಮಾಸ ಶುರು: ಈ ತಿಂಗಳಿನ ಅಧ್ಯಾತ್ಮಿಕ ಮಹತ್ವ ಏನು ಗೊತ್ತಾ? ಇಲ್ಲಿದೆ ವಿವರಣೆ
ಮಾರ್ಗಶಿರ ಮಾಸವು ಭಗವಾನ್ ಶ್ರೀಕೃಷ್ಣ ಮತ್ತು ಲಕ್ಷ್ಮೀದೇವಿಗೆ ಪ್ರಿಯವಾದ ಮಾಸ. ಬ್ರಾಹ್ಮೀ ಮುಹೂರ್ತದಲ್ಲಿ ವಿಷ್ಣುವಿನ ಆರಾಧನೆ, ಅನ್ನದಾನ, ಶಂಖ ಪೂಜೆ, ತೀರ್ಥಸ್ನಾನದಂತಹ ಆಚರಣೆಗಳಿಂದ ಆರೋಗ್ಯ, ಐಶ್ವರ್ಯ ವೃದ್ಧಿಯಾಗಿ ಸಕಲ ದೋಷಗಳು ನಿವಾರಣೆಯಾಗುತ್ತವೆ. ಈ ಮಾಸದಲ್ಲಿ ಶ್ರದ್ಧಾಭಕ್ತಿಯಿಂದ ದೇವರನ್ನು ಆರಾಧಿಸುವುದರಿಂದ ಶುಭಫಲಗಳು ಪ್ರಾಪ್ತಿಸುತ್ತವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.
ಇಂದಿನಿಂದ ಮಾರ್ಗಶಿರ ಮಾಸ ಶುರುವಾಗಿದೆ. ಭಗವಾನ್ ಶ್ರೀಕೃಷ್ಣನೇ ‘ಮಾಸಾನಾಂ ಮಾರ್ಗಶಿರೋಸ್ಮಿ’ ಎಂದು ಹೇಳಿದ್ದು, ಈ ಮಾಸವು ಶ್ರೀಕೃಷ್ಣ ಮತ್ತು ಲಕ್ಷ್ಮೀದೇವಿಗೆ ಅತ್ಯಂತ ಪ್ರಿಯವಾದುದು ಎಂದು ಹೇಳಲಾಗಿದೆ. ಈ ಮಾಸದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ವಿಷ್ಣುವಿನ ಆರಾಧನೆ, ವಿಷ್ಣು ಸ್ಮರಣೆ ಮಾಡುವವರಿಗೆ ಆರೋಗ್ಯ, ಐಶ್ವರ್ಯ ವೃದ್ಧಿಯಾಗಿ ಕಂಟಕ ಮತ್ತು ದೋಷಗಳು ದೂರವಾಗುತ್ತವೆ. ಉಪವಾಸ, ಭಗವನ್ನಾಮಸ್ಮರಣೆ, ದೇವಾಲಯ ಭೇಟಿ ಮತ್ತು ಅನ್ನದಾನ ಈ ಮಾಸದಲ್ಲಿ ಮಹತ್ವವನ್ನು ಪಡೆದಿವೆ. ಸ್ಕಂದ ಪುರಾಣದ ಪ್ರಕಾರ, ಈ ಮಾಸದಲ್ಲಿ ಮಾಡುವ ಅನ್ನದಾನವು ಅಪಾರ ಪುಣ್ಯವನ್ನು ತರುತ್ತದೆ. ಸೂರ್ಯ ಭಗವಾನರು ತಮ್ಮ ಶಕ್ತಿ ವೃದ್ಧಿಗಾಗಿ ಇದೇ ಮಾಸದಲ್ಲಿ ವಿಷ್ಣುವನ್ನು ಆರಾಧಿಸಿದ್ದರು. ಶ್ರೀರಾಮರು ಸೀತಾದೇವಿಯನ್ನು ವಿವಾಹವಾದ ಮಾಸವೂ ಇದೇ ಆಗಿದೆ. ಈ ಮಾಸದಲ್ಲಿ ಶಂಖ ಪೂಜೆ, ತೀರ್ಥಸ್ನಾನ ಮತ್ತು ಸಂತಾನ ಪ್ರಾಪ್ತಿಗಾಗಿ ವಿಷ್ಣು ಆರಾಧನೆ ಮಾಡುವುದು ಶುಭ ಫಲಗಳನ್ನು ನೀಡುತ್ತದೆ. ಓಂ ಕೃಷ್ಣಾಯ ನಮಃ ಎಂಬ ಮಂತ್ರ ಪಠಣೆ ಕೂಡ ವಿಶೇಷವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.
