ಊಟ ಇಲ್ಲ ಅಂದಿದ್ದಕ್ಕೆ ಹೋಟೆಲ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು, ಗಂಗಾವತಿ ಬಳಿ ಆನೆಗುಂದಿಯಲ್ಲಿ ನಡೆದ ಘಟನೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 26, 2022 | 4:13 PM

ಗಂಗಾವತಿಯಲ್ಲಿ ತಾಪಮಾನ ಹೆಚ್ಚಿದೆ. ಆ ಭಾಗದಲ್ಲಿ ಬೇಸಿಗೆ ಅಸಹನೀಯವಾಗಿರುತ್ತದೆ. ಇದೇ ಕಾರಣಕ್ಕೆ ಹುಲ್ಲು ಮತ್ತು ಕಟ್ಟಿಗೆಯಿಂದ ನಿರ್ಮಿಸಲಾಗಿದ್ದ ಹೋಟೆಲ್ ಕೋಣೆಗಳು ನೋಡುನೋಡುತ್ತಿದ್ದಂತೆ ಧಗಧಗ ಉರಿಯಲಾರಂಭಿಸಿವೆ.

Gangavati: ಇದು ಅತಿರೇಕ, ಹುಚ್ಚುತನ ಮತ್ತು ದುಷ್ಟತನದ ಪರಮಾವಧಿ ಮಾರಾಯ್ರೇ. ಪ್ರಾಮಾಣಿಕವಾಗಿ ಹೋಟೆಲ್ ನಡೆಸಲು ಬಿಡುತ್ತಿಲ್ಲ ಈ ದುಷ್ಟರು. ಅವರು ಯಾರು ಅಂತ ನಮಗೂ ಗೊತ್ತಿಲ್ಲ. ಗಂಗಾವತಿ ಗ್ರಾಮೀಣ ಠಾಣೆಯ (Gangavati rural police station) ಪೊಲೀಸರೇ ಅವರನ್ನು ಪತ್ತೆ ಹಚ್ಚಿ ನಮಗೆ ವಿವರಗಳನ್ನು ತಿಳಿಸಬೇಕು. ವಿಷಯ ಏನೆಂದರೆ, ಕೆಲ ಅಪರಿಚಿತ (strangers) ದುಷ್ಟರು ಬುಧವಾರ ರಾತ್ರಿ 11 ಗಂಟೆಗೆ ಊಟಕ್ಕೆಂದು ಗಂಗಾವತಿಯಿಂದ ಸುಮಾರು 10-12 ಕಿಮೀ ದೂರವಿರುವ ಆನೆಗುಂದಿ (Anegundi) ಪಟ್ಟಣದ ಹೊರವಲಯದಲ್ಲಿ ಹೊತ್ತಿ ಉರಿಯುತ್ತಿರುವ ಮತ್ತು ಧಾಬಾ ಶೈಲಿಯಲ್ಲಿ ನಿರ್ಮಿಸಿದ್ದ ಹೋಟೆಲ್ ಗೆ ಬಂದಿದ್ದಾರೆ. ಅವರು ಪಾನಮತ್ತರಾಗಿದ್ದರೆಂದು ಬೇರೆ ಹೇಳಬೇಕಿಲ್ಲ. ಊಟ ಇಲ್ಲ ಮುಗಿದು ಹೋಗಿದೆ, ಇದು ಹೋಟೆಲ್ ಮುಚ್ಚುವ ಸಮಯ ಅಂತ ಅವರಿಗೆ ನಯವಾಗೇ ತಿಳಿಸಲಾಗಿದೆ.

ಅದ್ಹೇಗೆ ಊಟ ಇಲ್ಲ, ನಮಗೆ ಊಟ ಬೇಕೇ ಬೇಕು ಅಂತ ದುಷ್ಟರು ಸೊಕ್ಕಿನಿಂದ ಹೇಳಿದಾಗಲೂ ಹೋಟೆಲ್ ನವರು ಕ್ಷಮಿಸಿ ಎಲ್ಲ ಕ್ಲೋಸ್ ಮಾಡಿಯಾಗಿದೆ ಅಂದಾಗ ರೊಚ್ಚಿಗೆದ್ದ ಮತಿಹೀನ ಕುಡುಕರು ಮಾಡಿದ್ದೇನು ಅನ್ನೋದು ನಿಮಗೆ ವಿಡಿಯೋನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹೇಡಿಗಳು ಗುಡಿಸಲಿನ ಮಾದರಿಯಲ್ಲಿ ನಿರ್ಮಿಸಿದ್ದ ಹೋಟೆಲ್ ಗೆ ಕೊಳ್ಳಿಯಿಟ್ಟು ಪರಾರಿಯಾಗಿದ್ದಾರೆ.

ಹೋಟೆಲ್ ಮಾಲೀಕರು ರೂಮುಗಳ ಹಾಗೆ 11 ಗುಡಿಸಲುಗಳನ್ನು ನಿರ್ಮಿಸಿ ಟೇಬಲ್ ಮತ್ತು ಚೇರುಗಳನ್ನು ಹಾಕಿದ್ದಾರೆ. ಗಂಗಾವತಿಯಲ್ಲಿ ತಾಪಮಾನ ಹೆಚ್ಚಿದೆ. ಆ ಭಾಗದಲ್ಲಿ ಬೇಸಿಗೆ ಅಸಹನೀಯವಾಗಿರುತ್ತದೆ. ಇದೇ ಕಾರಣಕ್ಕೆ ಹುಲ್ಲು ಮತ್ತು ಕಟ್ಟಿಗೆಯಿಂದ ನಿರ್ಮಿಸಲಾಗಿದ್ದ ಹೋಟೆಲ್ ಕೋಣೆಗಳು ನೋಡುನೋಡುತ್ತಿದ್ದಂತೆ ಧಗಧಗ ಉರಿಯಲಾರಂಭಿಸಿವೆ.

ಉರಿಯುತ್ತಿದ್ದ ಹೋಟೆಲ್ ನೋಡಿ ಸ್ಥಳೀಯರು ಒಳಗಿದ್ದವರ ನೆರವಿಗೆ ಬಂದಿದ್ದಾರೆ. ಪ್ರಾಣಾಪಾಯವೇನೂ ಸಂಭವಿಸಿಲ್ಲವಾದರೂ, ಪೂರ್ತಿ ಹೋಟೆಲ್ ಬೆಂಕಿಗಾಹುತಿಯಾಗಿದೆ.

ಆಗಲೇ ಹೇಳಿದ ಹಾಗೆ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಟರ ಪತ್ತೆಗೆ ಜಾಲ ಬೀಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.