ಪತ್ನಿ ಭವಾನಿಯಿಂದ ಅವಾಚ್ಯ ಪದ ಬಳಸಿ ನಿಂದನೆ, ಆದರೆ ಕ್ಷಮೆಯಾಚಿಸಿದ್ದು ಪತಿ ಹೆಚ್ ಡಿ ರೇವಣ್ಣ

Updated on: Dec 04, 2023 | 4:55 PM

ಭವಾನಿ ರೇವಣ್ಣ ಅವರು ತಮ್ಮ ಕಾರಿಗೆ ಗುದ್ದಿದ ದ್ವಿಚಕ್ರ ಸವಾರನನ್ನು ಬಯ್ಯುವಾಗ ಬಳಸಿರುವ ಭಾಷೆ ಒಬ್ಬ ಜನ ಪ್ರತಿನಿಧಿ, ಶಾಸಕನ ಪತ್ನಿ, ಸಂಸದ ಮತ್ತು ವಿಧಾನ ಪರಿಷತ್ ಸದಸ್ಯನ ತಾಯಿಗೆ ತಕ್ಕುದಲ್ಲ. ಹಾಸನ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದ ಭವಾನಿ ಜಿಲ್ಲೆಯಾದ್ಯಂತ ಒಳ್ಳೆ ಹೆಸರಿಟ್ಟುಕೊಂಡಿದ್ದಾರೆ, ಹಾಗಾಗಿ, ಅವರು ಸಾರ್ವಜನಿಕವಾಗಿ ಸಂಯಮ ಕಳೆದುಕೊಳ್ಳಬಾರದಿತ್ತು.

ಬೆಳಗಾವಿ: ಜೆಡಿಎಸ್ ನಾಯಕಿ ಭವಾನಿ ರೇವಣ್ಣ (Bhavani Revanna) ಅವರ ಕಾರು ಮತ್ತು ಬೈಕ್ ಒಂದರ ನಡುವೆ ಮೈಸೂರಿನ ಸಾಲಿಗ್ರಾಮ ಜಂಕ್ಷನ್ ಬಳಿ ಮೂರು ದಿನಗಳ ಹಿಂದೆ ನಡೆದ ಒಂದು ಅಪಘಾತದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಅವರ ಕುಟುಂಬದವರು ರಕ್ಷಣೆಗೆ ಧಾವಿಸಿದ್ದಾರೆ. ಬೈಕ್ ಸವಾರನಿಗೆ (biker) ಭವಾನಿ ಅವರು ಅವಾಚ್ಯ ಪದಗಳಲ್ಲಿ ನಿಂದಿಸಿರೋದು ವಿಡಿಯೋದಲ್ಲಿ ದಾಖಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಬೆಳಗಾವಿಗೆ ಬಂದಿರುವ ಭವಾನಿಯವರ ಪತಿ ಮತ್ತು ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರನ್ನು ಸುವರ್ಣ ಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳು ವಿಡಿಯೋ ಬಗ್ಗೆ ಕೇಳಿದಾಗ ಅವರು ತಪ್ಪೆಲ್ಲ ಬೈಕ್ ಸವಾರನ ಮೇಲೆ ಹೊರೆಸಿದರು. ಅವನು ಕುಡಿದು ಬೈಕ್ ಓಡಿಸುತ್ತಿದ್ದ ಅಂತಲೂ ಹೇಳಿದರು. ಅಲ್ಲಾ ಸಾರ್, ಮೇಡಂ ಮನಸ್ಸಿಗೆ ಬಂದಂತೆ ಬೈದಾಡಿದರಲ್ಲ ಅಂತ ಪತ್ರಕರ್ತರು ಹೇಳಿದಾಗ ತಮ್ಮ ವರಸೆ ಬದಲಾಯಿಸಿದ ರೇವಣ್ಣ ತನ್ನ ಪತ್ನಿಯ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುವೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More