‘ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
ಮುಖ್ಯಾಂಶಗಳು
- ಜೋಡಿ ನಂ 1 ಸೀಸನ್ 3 ಗ್ರ್ಯಾಂಡ್ ಫಿನಾಲೆ
- ಕೋಟೆ ಪ್ರಭಾಕರ್ ಮತ್ತು ಮಾಲತಿ ದಂಪತಿಗೆ ಒಲಿದ ವಿನ್ನರ್ ಕಿರೀಟ
- ಜೀ ಕನ್ನಡದಿಂದ ಸಿಕ್ಕಿತು ಭಾರಿ ಬಹುಮಾನ
ಝೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಜೋಡಿ ನಂ 1 ಸೀಸನ್ 3' ಮಹಾಪ್ರಶಸ್ತಿ ಸುತ್ತಿಗೆ ಭರ್ಜರಿ ತೆರೆ ಬಿದ್ದಿದೆ. ಈ ಸೀಸನ್‌ನ ಪ್ರತಿಷ್ಠಿತ ವಿನ್ನರ್ ಟ್ರೋಫಿಯನ್ನು ನಟ ಕೋಟೆ ಪ್ರಭಾಕರ್ ಹಾಗೂ ಮಾಲತಿ ದಂಪತಿ ತಮ್ಮ ಮುಡಿಗೇರಿಸಿಕೊಂಡಿದ್ದು, ಭಾರಿ ನಗದು ಬಹುಮಾನವನ್ನು ಗೆದ್ದುಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಜೋಡಿ ನಂ 1 ಸೀಸನ್ 3’ ರ ರೋಮಾಂಚಕ ಗ್ರ್ಯಾಂಡ್ ಫಿನಾಲೆ ಮುಕ್ತಾಯಗೊಂಡಿದ್ದು, ಕೋಟೆ ಪ್ರಭಾಕರ್ ಮತ್ತು ಮಾಲತಿ ದಂಪತಿ ವಿನ್ನರ್ಸ್ ಆಗಿ ಹೊರಹೊಮ್ಮಿದ್ದಾರೆ. ವೇದಿಕೆಯ ಮೇಲಿದ್ದ ಪ್ರಬಲ ಎಂಟು ಜೋಡಿಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಮಾಳವಿಕಾ ಅವರು ವಿಜೇತರ ಹೆಸರನ್ನು ಘೋಷಿಸುತ್ತಿದ್ದಂತೆ ಇಡೀ ವೇದಿಕೆಯಲ್ಲಿ ಸಂಭ್ರಮ ಮನೆಮಾಡಿತು. ವಿಜೇತ ಜೋಡಿಗೆ ಜೀ ಕನ್ನಡ ವಾಹಿನಿಯ ವತಿಯಿಂದ ಆಕರ್ಷಕ ವಿನ್ನರ್ಸ್ ಟ್ರೋಫಿ ಹಾಗೂ 5 ಲಕ್ಷ ರೂಪಾಯಿಗಳ ನಗದು ಬಹುಮಾನದ ಚೆಕ್ ನೀಡಿ ಗೌರವಿಸಲಾಯಿತು.
ಈ ಮಹೋನ್ನತ ಗೆಲುವಿನ ನಂತರ ವೇದಿಕೆಯ ಮೇಲೆ ಮಾತನಾಡಿದ ನಟ ಕೋಟೆ ಪ್ರಭಾಕರ್ ಅತ್ಯಂತ ಭಾವುಕರಾದರು. ‘ಸಾಮಾನ್ಯವಾಗಿ ಎಲ್ಲರೂ ಬೆಳ್ಳಿತೆರೆಯಿಂದ ಕಿರುತೆರೆಗೆ ಬರುತ್ತಾರೆ, ಆದರೆ ನಾನು ಕಿರುತೆರೆಯ ಈ ವೇದಿಕೆಯ ಮೂಲಕ ನನ್ನ ಪತ್ನಿಗಾಗಿ ಹೊಸ ಇತಿಹಾಸ ಸೃಷ್ಟಿಸಿದ್ದೇನೆ. ನನ್ನ ಹೆಂಡತಿಗಾಗಿ ಈ ವೇದಿಕೆಗೆ ಬಂದಿದ್ದು ಸಾರ್ಥಕವಾಯಿತು’ ಎಂದು ಕಣ್ಣೀರು ಹಾಕಿದರು. ಅವರ ಪತ್ನಿ ಮಾಲತಿ ಮಾತನಾಡಿ, ‘ನಮ್ಮ ಮಗಳು ನೀಡಿದ ಪ್ರೋತ್ಸಾಹದಿಂದಲೇ ನಾವು ಈ ಸ್ಪರ್ಧೆಗೆ ಬರಲು ಸಾಧ್ಯವಾಯಿತು, ಇಲ್ಲದಿದ್ದರೆ ನಾನು ಬರುತ್ತಲೇ ಇರಲಿಲ್ಲ’ ಎಂದು ನೆನೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

