ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ: ಪ್ರಶ್ನಿಸಿದ ಪ್ರಯಾಣಿಕನಿಗೆ ಯಾರಿಗೆ ಹೇಳ್ತಿಯಾ ಹೇಳಿಕೋ, ರೆಕಾರ್ಡ್ ಮಾಡಿಕೋ ಎಂದ ಚಾಲಕ

Edited By:

Updated on: Oct 08, 2026 | 8:25 AM

ನಂಜನಗೂಡು ಮಾರ್ಗದಲ್ಲಿ ಚಲಿಸುವ ಬಸ್‌ನಲ್ಲಿ ಚಾಲಕನೊಬ್ಬ 50ಕ್ಕೂ ಹೆಚ್ಚು ಪ್ರಯಾಣಿಕರ ಜೀವಕ್ಕೆ ಕುತ್ತು ತರುವಂತೆ ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಿದ್ದಾನೆ. ಇದನ್ನು ಪ್ರಶ್ನಿಸಿದ ಪ್ರಯಾಣಿಕನಿಗೆ ಉಡಾಫೆಯಿಂದ ಉತ್ತರಿಸಿದ ಚಾಲಕನ ವರ್ತನೆ ವೈರಲ್ ಆಗಿದೆ. ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬೇಜವಾಬ್ದಾರಿ ಚಾಲಕನ ವಿರುದ್ಧ ಸಾರಿಗೆ ಇಲಾಖೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮೈಸೂರು, ಅ.8: ಚಲಿಸುವ ಬಸ್‌ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರೂ, ಅವರ ಪ್ರಾಣದ ಹಂಗು ತೊರೆದು ಚಾಲಕನೊಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತಲೇ ವಾಹನ ಚಾಲನೆ ಮಾಡಿರುವ ಜವಾಬ್ದಾರಿರಹಿತ ಘಟನೆ ನಂಜನಗೂಡು ಭಾಗದಲ್ಲಿ ಬೆಳಕಿಗೆ ಬಂದಿದೆ. ಇದನ್ನು ಪ್ರಶ್ನಿಸಿದ ಪ್ರಯಾಣಿಕನಿಗೆ ಉಡಾಫೆಯಿಂದ ಉತ್ತರ ನೀಡಿ, “ಯಾರಿಗೆ ಹೇಳ್ತಿಯೋ ಹೇಳಿಕೋ, ರೆಕಾರ್ಡ್ ಮಾಡಿಕೋ” ಎಂದು ದರ್ಪ ತೋರಿರುವ ಚಾಲಕನ ವರ್ತನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಂಜನಗೂಡು, ಕೂಗಳೂರು, ಸಿದ್ದಯ್ಯನಹುಂಡಿ ಹಾಗೂ ಕಸುವಿನಹಳ್ಳಿ ಮಾರ್ಗವಾಗಿ ಸಂಚರಿಸುವ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಚಾಲಕ ಬಸ್ ಚಾಲನೆ ಮಾಡುವಾಗ ಏಕಾಗ್ರತೆ ವಹಿಸದೆ, ಒಂದು ಕೈಯಲ್ಲಿ ಮೊಬೈಲ್ ಹಿಡಿದು ಸುದೀರ್ಘವಾಗಿ ಮಾತನಾಡುತ್ತಾ ಚಾಲನೆ ಮಾಡುತ್ತಿದ್ದ. ಇದನ್ನು ಗಮನಿಸಿದ ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು “ಮೊಬೈಲ್ ಬಳಸಿ ಚಾಲನೆ ಮಾಡಬೇಡಿ, ಅಪಾಯವಾಗುತ್ತದೆ” ಎಂದು ಎಚ್ಚರಿಸಿದ್ದಾರೆ. ಆದರೆ ಚಾಲಕ ತನ್ನ ತಪ್ಪನ್ನು ತಿದ್ದುಕೊಳ್ಳುವ ಬದಲು, ಪ್ರಯಾಣಿಕನಿಗೆ ಉಡಾಫೆಯ ಉತ್ತರ ನೀಡಿದ್ದಾನೆ. “ಯಾರಿಗೆ ಹೇಳ್ತಿಯೋ ಹೇಳಿಕೋ, ಬೇಕಿದ್ದರೆ ವಿಡಿಯೋ ರೆಕಾರ್ಡ್ ಮಾಡಿಕೋ” ಎಂದು ಸನ್ನೆ ಮಾಡುತ್ತಾ ದರ್ಪ ಮೆರೆದಿದ್ದಾನೆ. ಚಾಲಕನ ಬೇಜವಾಬ್ದಾರಿ ವರ್ತನೆಯನ್ನು ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಬಸ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ ಈ ಚಾಲಕನ ಮೊಬೈಲ್ ಬಳಕೆಯ ದೃಶ್ಯ ಹಾಗೂ ದರ್ಪದ ಮಾತುಗಳ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ರೀತಿ ನಿರ್ಲಕ್ಷ್ಯ ವಹಿಸಿದ ಚಾಲಕನ ವಿರುದ್ಧ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಸೂಕ್ತ ಕಾನೂನು ಹಾಗೂ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More