ದಿಟ್ಟ ಹೋರಾಟ… ಸೋಲುವ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿದ ವೆಸ್ಟ್ ಇಂಡೀಸ್..!

Updated on: Dec 06, 2025 | 11:05 AM

New Zealand vs West Indies, 1st Test: ದ್ವಿತೀಯ ಇನಿಂಗ್ಸ್ ಶುರು ಮಾಡಿದ ನ್ಯೂಝಿಲೆಂಡ್ ಪರ ರಚಿನ್ ರವೀಂದ್ರ (176) ಹಾಗೂ ಟಾಮ್ ಲಾಥಮ್ (145) ಶತಕ ಸಿಡಿಸಿದರು. ಈ ಶತಕಗಳ ನೆರವಿನೊಂದಿಗೆ ನ್ಯೂಝಿಲೆಂಡ್ ಬರೋಬ್ಬರಿ 466 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ಕೊನೆಯ ಎರಡು ದಿನದಾಟಗಳಲ್ಲಿ ವೆಸ್ಟ್ ಇಂಡೀಸ್​ ತಂಡಕ್ಕೆ 531 ರನ್​ಗಳ ಗುರಿ ನೀಡಲಾಯಿತು.

ನ್ಯೂಝಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಅದು ಕೂಡ ವಿಂಡೀಸ್ ಪಡೆಯ ದಿಟ್ಟ ಹೋರಾಟದೊಂದಿಗೆ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ರೋಸ್ಟನ್ ಚೇಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 231 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ವೆಸ್ಟ್ ಇಂಡೀಸ್ ತಂಡವು ಕೇವಲ 167 ರನ್​ಗಳಿಸಿ ಆಲೌಟ್ ಆಯಿತು.

ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಶುರು ಮಾಡಿದ ನ್ಯೂಝಿಲೆಂಡ್ ಪರ ರಚಿನ್ ರವೀಂದ್ರ (176) ಹಾಗೂ ಟಾಮ್ ಲಾಥಮ್ (145) ಶತಕ ಸಿಡಿಸಿದರು. ಈ ಶತಕಗಳ ನೆರವಿನೊಂದಿಗೆ ನ್ಯೂಝಿಲೆಂಡ್ ಬರೋಬ್ಬರಿ 466 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ಕೊನೆಯ ಎರಡು ದಿನದಾಟಗಳಲ್ಲಿ ವೆಸ್ಟ್ ಇಂಡೀಸ್​ ತಂಡಕ್ಕೆ 531 ರನ್​ಗಳ ಗುರಿ ನೀಡಲಾಯಿತು.

ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 72 ರನ್​ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್​ಗಳು ಪೆವಿಲಿಯನ್​ಗೆ ಮರಳಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ಶಾಯ್ ಹೋಪ್ 140 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.

ಇದಾಗ್ಯೂ ವೆಸ್ಟ್ ಇಂಡೀಸ್ ತಂಡದ ಸ್ಕೋರ್​ 277 ರನ್ ಆಗುವಷ್ಟರಲ್ಲಿ 6 ವಿಕೆಟ್​ ಕಳೆದುಕೊಂಡಿತು. ಇತ್ತ ಸೋಲಿನತ್ತ ಮುಖ ಮಾಡಿದ ವಿಂಡೀಸ್ ಪಡೆಗೆ ಜಸ್ಟಿನ್ ಗ್ರೀವ್ಸ್ ಹಾಗೂ ಕೆಮರ್ ರೋಚ್ ಆಸೆಯಾಗಿ ನಿಂತರು. ಅದು ಕೂಡ ಬರೋಬ್ಬರಿ 180 ರನ್​ಗಳ ಜೊತೆಯಾಟದೊಂದಿಗೆ.

ಇದರ ನಡುವೆ ಜಸ್ಟಿನ್ ಗ್ರೀವ್ಸ್ ಅಜೇಯ 202 ರನ್​ಗಳಿಸಿದರೆ, ಕೆಮರ್ ರೋಚ್ ಅಜೇಯ 58 ರನ್ ಬಾರಿಸಿದರು. ಈ ಮೂಲಕ ಐದನೇ ದಿನದಾಟದಲ್ಲಿ ಸಂಪೂರ್ಣ ಬ್ಯಾಟಿಂಗ್ ಮಾಡುವ ಮೂಲಕ ಸೋಲಿಂದ ವೆಸ್ಟ್ ಇಂಡೀಸ್ ತಂಡವನ್ನು ಪಾರು ಮಾಡಿ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾದರು.