ವಾಹನ ಸವಾರರೇ ಗಮನಿಸಿ: ಏಪ್ರಿಲ್ 1 ರಿಂದ ಟೋಲ್‌ನಲ್ಲಿ ನಗದು ಪಾವತಿ ಬಂದ್; ಫಾಸ್ಟ್​ಟ್ಯಾಗ್ ಇಲ್ಲಾಂದ್ರೆ ನೋ ಎಂಟ್ರಿ!

Updated on: Mar 30, 2026 | 1:03 PM

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಪ್ರಿಲ್ 1 ರಿಂದ ನಗದು ಪಾವತಿ ವ್ಯವಸ್ಥೆ ಇತಿಹಾಸ ಸೇರಲಿದೆ. ಇನ್ಮುಂದೆ ಫಾಸ್ಟ್​ಟ್ಯಾಗ್ ಅಥವಾ ಯುಪಿಐ ಮೂಲಕವೇ ಟೋಲ್ ಪಾವತಿಸುವುದು ಕಡ್ಡಾಯ. ಫಾಸ್ಟಾಗ್ ರೀಡರ್ ಸ್ಕ್ಯಾನ್ ಆಗದಿದ್ದರೆ ಮ್ಯಾನುಯಲ್ ಎಂಟ್ರಿಗೂ ಅವಕಾಶವಿಲ್ಲ ಎಂದು ಎನ್‌ಎಚ್‌ಎಐ ಸ್ಪಷ್ಟಪಡಿಸಿದೆ. ನೆಲಮಂಗಲ ಟೋಲ್ ಬಳಿ ಈ ಕುರಿತು ಜಾಗೃತಿ ಫಲಕಗಳನ್ನು ಅಳವಡಿಸಲಾಗಿದೆ.

ಬೆಂಗಳೂರು, ನೆಲಮಂಗಲ, ಮಾರ್ಚ್ 30: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ಸೂಚನೆಯೊಂದನ್ನು ನೀಡಿದೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ (Toll Plazas) ನಗದು ಪಾವತಿಯನ್ನು (Cash Payment) ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ನೆಲಮಂಗಲ ಟೋಲ್ ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಈಗಾಗಲೇ ಸಾರ್ವಜನಿಕ ಪ್ರಕಟಣೆಯ ಫಲಕಗಳನ್ನು ಹಾಕಲಾಗಿದೆ.

ಏನೇನು ಬದಲಾವಣೆ?

ಹೊಸ ನಿಯಮದ ಪ್ರಕಾರ, ಟೋಲ್ ಬೂತ್​​ಗಳಲ್ಲಿ ನಗದು ಪಡೆಯಲಾಗುವುದಿಲ್ಲ. ಸುಗಮ ಪ್ರಯಾಣಕ್ಕಾಗಿ ಕಡ್ಡಾಯವಾಗಿ ಫಾಸ್ಟಾಗ್ ಅಥವಾ ಯುಪಿಐ ಮೂಲಕವೇ ಪಾವತಿ ಮಾಡಬೇಕಿದೆ. ಏಪ್ರಿಲ್ 15 ರಿಂದ ಫಾಸ್ಟಾಗ್ ಸ್ಕ್ಯಾನ್ ಆಗದಿದ್ದರೆ ಸಿಬ್ಬಂದಿ ಮ್ಯಾನುಯಲ್ ಆಗಿ ವಾಹನ ಸಂಖ್ಯೆ ನಮೂದಿಸಿ ಟೋಲ್ ಪಡೆಯುವುದನ್ನು ರದ್ದುಗೊಳಿಸಲಾಗಿದೆ. ಕೇವಲ ಆಟೋಮ್ಯಾಟಿಕ್ ಫಾಸ್ಟ್​ಟ್ಯಾಗ್ ರೀಡರ್ ಮೂಲಕ ಮಾತ್ರ ಪಾವತಿಗೆ ಅವಕಾಶವಿರುತ್ತದೆ. ನೆಲಮಂಗಲ-ಹಾಸನ ಹಾಗೂ ಬೆಂಗಳೂರು-ತುಮಕೂರು-ಪುಣೆ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಹೊಸ ನಿಯಮದ ಬಗ್ಗೆ ದೊಡ್ಡ ಫಲಕಗಳಲ್ಲಿ ಮಾಹಿತಿ ನೀಡಲಾಗಿದೆ.

ಹೀಗಾಗಿ ವಾಹನ ಸವಾರರು ತಮ್ಮ ಫಾಸ್ಟ್​ಟ್ಯಾಗ್ ಸಕ್ರಿಯವಾಗಿದೆಯೇ ಮತ್ತು ಅದರಲ್ಲಿ ಪೂರಕ ಬ್ಯಾಲೆನ್ಸ್ ಇದೆಯೇ ಎಂದು ಖಚಿತಪಡಿಸಿಕೊಂಡು ಹೆದ್ದಾರಿಗಿಳಿಯುವುದು ಉತ್ತಮ.

ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 30, 2026 01:02 PM
Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More