ಕಿಂಗ್ ಕೊಹ್ಲಿ ಆರ್ಭಟಕ್ಕೆ 2 ವರ್ಷ: ಪಂದ್ಯ ಗೆದ್ದ ಬಳಿಕ ನಡೆದಿದ್ದೇನು? ಇಲ್ಲಿದೆ ವಿಡಿಯೋ

|

Updated on: Oct 23, 2024 | 9:08 AM

Virat Kohli: ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಆಡಿದ ಸರ್ವಶ್ರೇಷ್ಠ ಇನಿಂಗ್ಸ್​ಗೆ ಇಂದು ಎರಡು ವರ್ಷ ತುಂಬಿದೆ. ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟ ಕಿಂಗ್ ಕೊಹ್ಲಿಗೆ ಸಿಕ್ಕ ಸ್ವಾಗತ ಹೇಗಿತ್ತು ಎಂಬುದರ ವಿಡಿಯೋ ಝಲಕ್ ಇಲ್ಲಿದೆ...

ಅದು 2022, ಅಕ್ಟೋಬರ್ 23… ಟಿ20 ವಿಶ್ವಕಪ್​ನ 16ನೇ ಪಂದ್ಯ. ಮೆಲ್ಬೋರ್ನ್​ನ ಎಂಸಿಜಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಕ್ ಪಡೆಯನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. 160 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 31 ರನ್​ಗಳಿಸುಷ್ಟರಲ್ಲಿ ಕೆಎಲ್ ರಾಹುಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್ ವಿಕೆಟ್ ಕಳೆದುಕೊಂಡಿತು. ಪವರ್​ಪ್ಲೇನಲ್ಲೇ ಸಿಕ್ಕ ಈ ಯಶಸ್ಸುಗಳಿಂದ ಪಾಕ್ ಬೌಲರ್​ಗಳು ಹಿರಿ ಹಿರಿ ಹಿಗ್ಗಿದ್ದರು. ಹೀಗೆ ಹಿಗ್ಗಿದ ಬೌಲರ್​ಗಳಿಗೆ ಕೊನೆಯವರೆಗೂ ಆ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲೇ ಇಲ್ಲ.

ಹೌದು, ಪಾಕ್ ಬೌಲರ್​ಗಳ ಮುಂದೆ ಸೆಟೆದು ನಿಂತ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ್ದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ ಕೊಹ್ಲಿಗೆ ಹಾರ್ದಿಕ್ ಪಾಂಡ್ಯ ಸಾಥ್ ನೀಡಿದರು. ಪರಿಣಾಮ ಕೊನೆಯ 4 ಓವರ್​ಗಳಲ್ಲಿ ಟೀಮ್ ಇಂಡಿಯಾಗೆ 54 ರನ್​ಗಳ ಅವಶ್ಯಕತೆಯಿತ್ತು.
ಆದರೆ 17ನೇ ಓವರ್​ನಲ್ಲಿ ನಸೀಮ್ ಶಾ ಕೇವಲ 6 ರನ್ ಮಾತ್ರ ನೀಡಿದ್ದರು. ಅದರಂತೆ ಕೊನೆಯ 18 ಎಸೆತಗಳಲ್ಲಿ ಭಾರತ ತಂಡವು 48 ರನ್​ಗಳ ಗುರಿ ಪಡೆಯಿತು. ಶಾಹೀನ್ ಶಾ ಅಫ್ರಿದಿ ಎಸೆದ 18ನೇ ಓವರ್​ನಲ್ಲಿ ವಿರಾಟ್ ಕೊಹ್ಲಿ 3 ಫೋರ್​ಗಳೊಂದಿಗೆ ಒಟ್ಟು 17 ರನ್ ಕಲೆಹಾಕಿದರು.

ಹ್ಯಾರಿಸ್ ರೌಫ್ ಎಸೆದ 19ನೇ ಓವರ್​ನ ಕೊನೆಯ ಎರಡು ಎಸೆತಗಳಲ್ಲಿ ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ 15 ರನ್ ಬಾರಿಸಿದರು. ಪರಿಣಾಮ ಕೊನೆಯ ಓವರ್​ನಲ್ಲಿ ಟೀಮ್ ಇಂಡಿಯಾ 16 ರನ್​ಗಳ ಗುರಿ ಪಡೆಯಿತು. ಮೊಹಮ್ಮದ್ ನವಾಝ್ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ (40) ಔಟಾದರು. ಇನ್ನು ಐದು ಎಸೆತಗಳಲ್ಲಿ 16 ರನ್​ಗಳ ಅವಶ್ಯಕತೆ. 2ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ 1 ರನ್ ಕಲೆಹಾಕಿದರೆ, 3ನೇ ಎಸೆತದಲ್ಲಿ ವಿರಾಟ್ ಕೊಹ್ಲಿ 2 ರನ್ ಓಡಿದರು.

4ನೇ ಎಸೆತವು ನೋ ಬಾಲ್… ಈ ನೋ ಬಾಲ್​ಗೆ ವಿರಾಟ್ ಕೊಹ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಮರು ಎಸೆತವು ವೈಡ್. ಮತ್ತೊಂದು ಎಸೆತದಲ್ಲಿ ವಿರಾಟ್ ಕೊಹ್ಲಿ ಬೌಲ್ಡ್ ಆದರೂ ಅದು ನೋ ಬಾಲ್​ನ ಮರು ಎಸೆತವಾಗಿತ್ತು. ಹೀಗಾಗಿ ಕೊಹ್ಲಿ-ಡಿಕೆ ಮೂರು ರನ್​ಗಳನ್ನು ಓಡಿದರು. 5ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸ್ಟಂಪ್ ಔಟಾದರು.

ಕೊನೆಯ ಎಸೆತದಲ್ಲಿ ಭಾರತ ತಂಡಕ್ಕೆ ಗೆಲ್ಲಲು 2 ರನ್​ಗಳ ಅವಶ್ಯಕತೆಯಿತ್ತು. ಆದರೆ ನವಾಝ್ ಎಸೆದ ಅಂತಿಮ ಎಸೆತ ಕೂಡ ವೈಡ್ ಆಯಿತು. ಇನ್ನು ಮರು ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಒಂದು ರನ್​ ಕಲೆಹಾಕುವ ಮೂಲಕ ಟೀಮ್ ಇಂಡಿಯಾಗೆ ರೋಚಕ ಜಯ ತಂದುಕೊಟ್ಟರು.
ಈ ಪಂದ್ಯದಲ್ಲಿ 53 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 82 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಗೆಲುವಿನ ರೂವಾರಿ ಎನಿಸಿಕೊಂಡರು. ಅದರಲ್ಲೂ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗ್ರೆಟೆಸ್ಟ್ ಇನಿಂಗ್ಸ್ ಆಡಿದ ಹಿರಿಮೆಗೂ ಕಿಂಗ್ ಕೊಹ್ಲಿ ಪಾತ್ರರಾದರು. ವಿರಾಟ್ ಕೊಹ್ಲಿಯ ಈ ಸರ್ವಶ್ರೇಷ್ಠ ಇನಿಂಗ್ಸ್​ಗೆ ಇಂದು 2 ವರ್ಷಗಳಾಗಿವೆ. ಈ ಅಮೋಘ ಗೆಲುವಿನ ಬಳಿಕ ಟೀಮ್ ಇಂಡಿಯಾದ ಸಂಭ್ರಮ ಹೇಗಿತ್ತು ಎಂಬುದರ ವಿಡಿಯೋವನ್ನು ಈ ಮೇಲೆ ನೀಡಲಾಗಿದೆ.

 

Follow us on