ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ ಬಳಿ ಡಿಜೆ ನಿಲ್ಲಿಸಿದ ಪೊಲೀಸರು, ಪ್ರತಿಭಟನೆ ನಡೆಸಿದ ಗ್ರಾಮಸ್ಥರು
ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ ಸಮೀಪ ಡಿಜೆ ಬಳಸಲು ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಟ್ರ್ಯಾಕ್ಟರ್‌ನಲ್ಲಿದ್ದ ಗಣೇಶ ಮೂರ್ತಿಯನ್ನು ರಸ್ತೆಯಲ್ಲೇ ನಿಲ್ಲಿಸಿ ಪ್ರತಿಭಟಿನೆ ನಡೆಸಿದ್ದಾರೆ. ನ್ಯಾಯ ಸಿಗುವವರೆಗೂ ವಿಸರ್ಜನೆ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಚಿಕ್ಕಮಗಳೂರು, ಅ.3: ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಬೀರೂರು ಪಟ್ಟಣದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯೂ ಪ್ರತಿಭಟನೆಗೆ ತಿರುಗಿದೆ. ಗಣೇಶ ವಿಸರ್ಜನಾ ವೇಳೆ ಪೊಲೀಸ್ ಇಲಾಖೆಯು ಡಿಜೆ ಬಳಸಲು ಅವಕಾಶ ನಿರಾಕರಿಸಿದೆ. ಈ ಕಾರಣಕ್ಕೆ ಸ್ಥಳೀಯ ನಿವಾಸಿಗಳು ಮತ್ತು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆರವಣಿಗೆಯನ್ನು ಮೊಟಕುಗೊಳಿಸಿ ರಸ್ತೆಯಲ್ಲೇ ಗಣೇಶ ಮೂರ್ತಿಯನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಯು ಪಟ್ಟಣದಲ್ಲಿ ಬಿಗುವಿನ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಬೀರೂರಿನ ಪ್ರಸಿದ್ಧ ದೊಡ್ಡ ಗಣಪತಿಯ ವಿಸರ್ಜನಾ ಮೆರವಣಿಗೆಯು ಪ್ರತಿ ವರ್ಷ ಡಿಜೆ ಮತ್ತು ಕಲಾ ತಂಡಗಳ ಮೆರವಣಿಗೆಯೊಂದಿಗೆ ಸಡಗರದಿಂದ ಸಾಗುತ್ತದೆ. ಈ ಹಿಂದೆ ಕೂಡ ಇದೇ ರೀತಿ ಡಿಜೆ ಬಳಸಿ ಗಣಪತಿ ವಿಸರ್ಜನಾ ಮೆರವಣಿಗೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಗ್ರಾಮಸ್ಥರು ಮತ್ತು ಆಯೋಜಕರು ತಿಳಿಸಿದ್ದಾರೆ. ಈ ವೇಳೆ ಪೊಲೀಸ್ ಇಲಾಖೆಯು ಮೆರವಣಿಗೆಗೆ ಸಹಕಾರ ನೀಡಿತ್ತು. ಆದರೆ ಈ ಬಾರಿ ಮೆರವಣಿಗೆಯು ಮಸೀದಿಯೊಂದರ ಸಮೀಪಕ್ಕೆ ತಲುಪುತ್ತಿದ್ದಂತೆಯೇ ಪೊಲೀಸರು ಏಕಾಏಕಿ ಡಿಜೆ ಧ್ವನಿವರ್ಧಕಗಳನ್ನು ಆಫ್ ಮಾಡುವಂತೆ ಸೂಚಿಸಿದ್ದಾರೆ. ಒಂದು ವೇಳೆ ಆದೇಶವನ್ನು ಪಾಲಿಸದಿದ್ದರೆ ಡಿಜೆ ಸೌಂಡ್ ಬಾಕ್ಸ್ಗಳನ್ನು ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಈ ನಿರ್ಧಾರವು ಗ್ರಾಮಸ್ಥರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮಸೀದಿ ಇರುವುದರಿಂದ ಡಿಜೆಗೆ ಅವಕಾಶ ನಿರಾಕರಿಸಲಾಗಿದೆ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
