ಭಯೋತ್ಪಾದಕರ ಕೈಗೆ ಮೊಬೈಲ್ ಫೋನ್ ಸಿಗಲು ಯಾರು ಕಾರಣ? ಇದರ ಬಗ್ಗೆ ಯಾಕೆ ತನಿಖೆ ಮಾಡಿಲ್ಲ: ಆರ್. ಅಶೋಕ್
ಆರ್. ಅಶೋಕ್ ಅವರು ಜೈಲುಗಳಲ್ಲಿ ಭಯೋತ್ಪಾದಕರ ಕೈಗೆ ಮೊಬೈಲ್ ಸೇರಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ. ಜೊತೆಗೆ ಜೈಲುಗಳಲ್ಲಿ ಡಿಸ್ಟಿಲರಿಗಳು, ಪೊಲೀಸರಿಂದ ದರೋಡೆ, ಹಾಳುಬಿದ್ದ ಸರ್ಕಾರಿ ಶಾಲೆಗಳು, ಶಿಕ್ಷಕರ ನೇಮಕಾತಿ ವಿಳಂಬ ಮತ್ತು ರಾಜ್ಯದ ರಸ್ತೆ ಗುಂಡಿಗಳ ಸಮಸ್ಯೆಗಳ ಕುರಿತು ಸರ್ಕಾರದ ವೈಫಲ್ಯಗಳನ್ನು ವಿರೋಧ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು, ನ.29: ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕರ್ನಾಟಕದ ಜೈಲುಗಳಲ್ಲಿನ ಭದ್ರತಾ ಲೋಪಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಭಯೋತ್ಪಾದಕರ ಕೈಗೆ ಮೊಬೈಲ್ ಫೋನ್‌ಗಳು ಹೇಗೆ ಸಿಗುತ್ತವೆ ಮತ್ತು ಜೈಲುಗಳಲ್ಲಿ ಡಿಸ್ಟಿಲರಿಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂದು ಕೇಳಿದ್ದಾರೆ. ಸೆಲೆಬ್ರಿಟಿಗಳ ಚಿಕ್ಕಪುಟ್ಟ ತಪ್ಪುಗಳಿಗೆ ಸುಪ್ರೀಂ ಕೋರ್ಟ್ ಮಟ್ಟಕ್ಕೆ ಹೋಗಿ ಜಾಮೀನು ರದ್ದುಗೊಳಿಸುವ ಸರ್ಕಾರವು, ದೇಶದ್ರೋಹಿಗಳ ವಿಷಯದಲ್ಲಿ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಜೈಲುಗಳಲ್ಲಿನ ಈ ಅಕ್ರಮಗಳ ಬಗ್ಗೆ ತನಿಖೆ ನಡೆಸುವ ಬದಲು, ಮಾಹಿತಿ ಸೋರಿಕೆ ಮಾಡಿದವರನ್ನು ಗುರುತಿಸಲು ಆದೇಶಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಪೊಲೀಸರೇ ದರೋಡೆಕೋರರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರ ಜತೆಗ ಬೆಂಗಳೂರಿನಲ್ಲಿ ನಡೆದ 7 ಕೋಟಿ ರೂಪಾಯಿ ದರೋಡೆ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ವಿರೋಧ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
