ಗೆಲ್ಲಲು 13 ಎಸೆತಗಳಲ್ಲಿ 3 ರನ್ ಬೇಕಿದ್ದಾಗ ಪಂದ್ಯ ರದ್ದುಗೊಳಿಸಿದ ಅಂಪೈರ್; ವಿಡಿಯೋ ನೋಡಿ
WBBL 2025-26: 2025-26ರ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಸಿಡ್ನಿ ಥಂಡರ್ ನಡುವಿನ ಮಳೆ ಪೀಡಿತ ಪಂದ್ಯದಲ್ಲಿ ಅಂಪೈರ್ ತೆಗೆದುಕೊಂಡ ವಿವಾದಾತ್ಮಕ ನಿರ್ಧಾರದಿಂದ ಗದ್ದಲ ಸೃಷ್ಟಿಯಾಗಿದೆ. ಗೆಲುವಿನ ಸನಿಹದಲ್ಲಿದ್ದ ಸಿಡ್ನಿ ಥಂಡರ್ ತಂಡವು ಪಂದ್ಯ ರದ್ದುಗೊಂಡಿದ್ದರಿಂದ ನಿರಾಶೆಗೊಂಡು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದೆ. ಈ ನಿರ್ಧಾರ ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.
2025-26ರ ಮಹಿಳಾ ಬಿಗ್ ಬ್ಯಾಷ್ ಲೀಗ್‌ನ 27ನೇ ಪಂದ್ಯ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಸಿಡ್ನಿ ಥಂಡರ್ ತಂಡಗಳ ನಡುವೆ ನಡೆಯಿತು. ಮಳೆ ಪೀಡಿತ ಈ ಪಂದ್ಯದಲ್ಲಿ ಅಂಪೈರ್ ತೆಗೆದುಕೊಂಡ ಅದೊಂದು ನಿರ್ಧಾರ ಇದೀಗ ಗದ್ದಲ ಸೃಷ್ಟಿಸಿದೆ. ಗೆಲುವಿನ ಸನಿಹದಲ್ಲಿದ್ದ ಸಿಡ್ನಿ ಥಂಡರ್ ತಂಡ ಅಂಪೈರ್ ನಿರ್ಧಾರದಿಂದಾಗಿ ನಿರಾಶೆಗೊಂಡಿದಲ್ಲದೆ, ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿತು.
ಅಷ್ಟಕ್ಕೂ ನಡೆದಿದ್ದೇನೆಂದರೆ, ಉಭಯ ತಂಡಗಳ ನಡುವಿನ ಈ ಪಂದ್ಯಕ್ಕೆ ಮಳೆ ಸಾಕಷ್ಟು ಭಾರಿ ಅಡ್ಡಿಪಡಿಸಿತು. ಹೀಗಾಗಿ ಪಂದ್ಯವನ್ನು ತಲಾ 5 ಓವರ್ಗಳಿಗೆ ನಿಗದಿಪಡಿಸಲಾಯಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ತಂಡವು ಐದು ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 45 ರನ್ ಕಲೆಹಾಕಿತು. ತಂಡದ ಪರ ಆರಂಭಿಕ ಆಟಗಾರ್ತಿ ಲಾರಾ ವೋಲ್ವಾರ್ಡ್ಟ್ 13 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 22 ರನ್ ಬಾರಿಸಿದರು. ನಾಯಕಿ ತಹ್ಲಿಯಾ ಮೆಕ್‌ಗ್ರಾತ್ 6 ಎಸೆತಗಳಲ್ಲಿ 12 ರನ್ ಗಳಿಸಿ ಅಜೇಯರಾಗುಳಿದರು.
ಈ ಗುರಿ ಬೆನ್ನಟ್ಟಿದ ಸಿಡ್ನಿ ಥಂಡರ್ ತಂಡ ಮಳೆ ಸುರಿಯುತ್ತಿದ್ದರೂ ಸಹ, ಮೊದಲ ಓವರ್‌ನಲ್ಲಿ 13 ರನ್ ಸೇರಿಸುವ ಮೂಲಕ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ 15 ಎಸೆತಗಳಲ್ಲಿ ಐದು ಬೌಂಡರಿಗಳನ್ನು ಒಳಗೊಂಡಂತೆ ಅಜೇಯ 38 ರನ್ ಗಳಿಸಿದರು. ಡಾರ್ಸಿ ಬ್ರೌನ್ ಎಸೆದ ಓವರ್‌ನಲ್ಲಿ ಅವರು ಸತತ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಹೀಗಾಗಿ ಎರಡನೇ ಓವರ್ ಅಂತ್ಯಕ್ಕೆ ಥಂಡರ್ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 35 ರನ್ ಕಲೆಹಾಕಿತ್ತು.
ಥಂಡರ್ ತಂಡ 2.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 43 ರನ್ ಗಳಿಸಿತ್ತು. ಆದರೆ ಈ ಹಂತದಲ್ಲಿ ಭಾರೀ ಮಳೆ ಸುರಿಯಲಾರಂಭಿಸಿದರಿಂದ ಆಟ ಸ್ಥಗಿತಗೊಂಡಿತು. ಮಳೆಯಿಂದ ಪಂದ್ಯ ನಿಂತಾಗ ಥಂಡರ್ ಗೆಲುವಿಗೆ 13 ಎಸೆತಗಳಲ್ಲಿ ಕೊನೆಯ ಮೂರು ರನ್ ಬೇಕಾಗಿದ್ದವು. ಆದರೆ ಮಳೆಯಿಂದಾಗಿ ಮೈದಾನ ಒದ್ದೆಯಾಗಿದ್ದರ ಪರಿಣಾಮವಾಗಿ ಚೆಂಡಿನ ಮೇಲ್ಮೈ ಜಾರುತ್ತಿತ್ತು. ಬೌಲರ್ಗಳಿಗೆ ಚೆಂಡನ್ನು ಹಿಡಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಗಮನಿಸಿದ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಿದರು.
ಅಂಪೈರ್ಗಳ ಈ ನಿರ್ಧಾರ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು. ಥಂಡರ್ ತಂಡದ ಆರಂಭಿಕ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ ಪಂದ್ಯ ರದ್ದತಿಯ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸುತ್ತಾ, ‘ತುಂಬಾ ನಿರಾಶೆಗೊಂಡಿದೆ. ಇದು ನಾಚಿಕೆಗೇಡಿನ ಸಂಗತಿ ಎಂದರೆ, ಇತ್ತ ಸ್ಟ್ರೈಕರ್ಸ್ ತಂಡದ ನಾಯಕಿ ತಹ್ಲಿಯಾ ಮೆಕ್‌ಗ್ರಾತ್, ‘ಇದು ಕಠಿಣ ನಿರ್ಧಾರ. ಮಳೆ ನಿಂತಿತ್ತು, ಆದರೆ ಚೆಂಡು ಜಾರುತ್ತಿದ್ದರಿಂದ ಅಂಪೈರ್‌ಗಳು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

