38ರ ಹರೆಯದಲ್ಲೂ ಎಂತಾ ಫಿಟ್ನೆಸ್..! ಅಶ್ವಿನ್ ಹಿಡಿದ ಕ್ಯಾಚ್​ಗೆ ಎಲ್ಲರೂ ಫಿದಾ

|

Updated on: Nov 02, 2024 | 9:43 PM

R Ashwin catch: ಮುಂಬೈನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಪಂದ್ಯದಲ್ಲಿ ಆರ್. ಅಶ್ವಿನ್ ಅವರ ಅದ್ಭುತ ಕ್ಯಾಚ್ ವಿಡಿಯೋ ವೈರಲ್ ಆಗಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಡೇರಿಲ್ ಮಿಚೆಲ್ ಅವರ ಕ್ಯಾಚ್ ಹಿಡಿಯುವ ಮೂಲಕ ಭಾರತಕ್ಕೆ ಮಹತ್ವದ ವಿಕೆಟ್ ಒದಗಿಸಿದರು. ಅಲ್ಲದೆ, ಅವರು 3 ವಿಕೆಟ್ ಪಡೆದು ತಂಡಕ್ಕೆ ನೆರವಾದರು. ಅಶ್ವಿನ್‌ರ ಈ ಅದ್ಭುತ ಪ್ರದರ್ಶನ ಅಭಿಮಾನಿಗಳನ್ನು ಸಂಭ್ರಮಿಸುವಂತೆ ಮಾಡಿದೆ.

ಭಾರತದ ದಿಗ್ಗಜ ಸ್ಪಿನ್ನರ್ ಆರ್ ಅಶ್ವಿನ್ ತಮ್ಮ ಅದ್ಭುತ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಆದರೆ ಮುಂಬೈ ಟೆಸ್ಟ್ ಪಂದ್ಯದ ಎರಡನೇ ದಿನದಂದು ಅವರು ತಮ್ಮ ಅಚ್ಚರಿಯ ಕ್ಯಾಚ್‌ನಿಂದ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ. 38 ವರ್ಷದ ಅಶ್ವಿನ್ ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಚಾಣಾಕ್ಷತನ ತೋರಿ ಹಿಡಿದ ಕ್ಯಾಚ್​ನ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದೆಲ್ಲದಕ್ಕೂ ಮೀರಿ ಈ ಕ್ಯಾಚ್ ಟೀಂ ಇಂಡಿಯಾಗೆ ಬಹಳ ಮಹತ್ವದ್ದಾಗಿತ್ತು. ಏಕೆಂದರೆ ಈ ಕ್ಯಾಚ್‌ನಿಂದಾಗಿ ಭಾರತ ತಂಡವು ಈ ಪಂದ್ಯದಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದ ಡೇರಿಲ್ ಮಿಚೆಲ್ ಅವರ ವಿಕೆಟ್ ಪಡೆದುಕೊಂಡಿತು.

ಅಶ್ವಿನ್ ಅಚ್ಚರಿಯ ಕ್ಯಾಚ್

ವಾಸ್ತವವಾಗಿ ನ್ಯೂಜಿಲೆಂಡ್‌ನ ಎರಡನೇ ಇನ್ನಿಂಗ್ಸ್‌ನ 28ನೇ ಓವರ್ ಬೌಲ್ ಮಾಡಿದ ರವೀಂದ್ರ ಜಡೇಜಾ ಅವರ ಓವರ್‌ನ 5ನೇ ಎಸೆತದಲ್ಲಿ ಡೇರಿಲ್ ಮಿಚೆಲ್ ಬಿಗ್ ಶಾಟ್ ಹೊಡೆದರು. ಆದರೆ ಚೆಂಡು ಬ್ಯಾಟ್‌ಗೆ ಕೆಳ ಭಾಗಕ್ಕೆ ಬಡಿದು ಗಾಳಿಯಲ್ಲಿ ಮಿಡ್​ ಆನ್​ ಕಡೆಗೆ ಹೋಯಿತು. ಹೀಗಾಗಿ ಅಶ್ವಿನ್ ಮಿಡ್ ಆನ್‌ನಿಂದ ಹಿಂದೆ ಓಡಿ ಈ ಕ್ಯಾಚ್ ಹಿಡಿಯಲು ಹೋದರು. ಈ ಸಂದರ್ಭದಲ್ಲಿ, ಅವರು 5 ಸೆಕೆಂಡುಗಳಲ್ಲಿ 19 ಮೀಟರ್ ಹಿಂದಕ್ಕೆ ಓಡಿ ಚೆಂಡನ್ನು ಕ್ಯಾಚ್ ಮಾಡುವಲ್ಲಿ ಯಶಸ್ವಿಯಾದರು. ಅಶ್ವಿನ್ ಅವರ ಈ ಚಾಣಾಕ್ಷತನ ಕಂಡು ಎಲ್ಲರೂ ಅಚ್ಚರಿಗೊಂಡರು. ಇದೀಗ ಅಭಿಮಾನಿಗಳು ಕೂಡ ಅಶ್ವಿನ್ ಅವರನ್ನು ಸಾಕಷ್ಟು ಹೊಗಳುತ್ತಿದ್ದಾರೆ.

ಅಶ್ವಿನ್ ಬೌಲಿಂಗ್ ಚಮತ್ಕಾರ

ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರವಿಚಂದ್ರನ್ ಅಶ್ವಿನ್ ಯಾವುದೇ ವಿಕೆಟ್ ಪಡೆಯಲಿಲ್ಲ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅವರ ಕಡೆಯಿಂದ ಅದ್ಭುತ ಪ್ರದರ್ಶನ ಕಂಡು ಬಂದಿತು. ಅವರು 16 ಓವರ್‌ಗಳಲ್ಲಿ 63 ರನ್‌ಗಳನ್ನು ನೀಡಿ 3 ವಿಕೆಟ್ ಉರುಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು ವಿಲ್ ಯಂಗ್, ರಚಿನ್ ರವೀಂದ್ರ ಮತ್ತು ಗ್ಲೆನ್ ಫಿಲಿಪ್ಸ್ ಅವರ ವಿಕೆಟ್ ಪಡೆದರು. ಇದರೊಂದಿಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:40 pm, Sat, 2 November 24

Follow us on