ಸೋನಿಯಾ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಿದ್ದರಾಮಯ್ಯರನ್ನು ಕಡೆಗಣಿಸಿದ್ರಾ?: ಡಿಸಿಎಂ ಪರಮೇಶ್ವರ್ ಅಚ್ಚರಿಯ ಹೇಳಿಕೆ
ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರಿಗೆ ಅಪಮಾನವಾಗಿದೆ ಎಂಬ ಆರೋಪವನ್ನು ಡಿಸಿಎಂ ಪರಮೇಶ್ವರ್ ತಳ್ಳಿಹಾಕಿದ್ದಾರೆ. ಸಿದ್ಧರಾಮಯ್ಯ ಅವರು ತಡವಾಗಿ ಬಂದ ಕಾರಣ ಹಿಂದಿನ ಸಾಲಿನಲ್ಲಿ ಕುಳಿತುಕೊಂಡರು. ಆಸನಗಳಿಗೆ ಯಾವುದೇ ವಿಶೇಷ ಸ್ಟಿಕ್ಕರ್ ಇರಲಿಲ್ಲ. ಸಿದ್ಧರಾಮಯ್ಯ ಪಕ್ಷದ ಹಿರಿಯ ನಾಯಕರು, ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು. ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ತಿಳಿಸಿದರು.
ಬೆಂಗಳೂರು, ನ.18: ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯವರಿಗೆ ಕೊನೆಯ ಸಾಲಿನಲ್ಲಿ ಕೂರಿಸಿ, ಅವಮಾನ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಾ.ಜಿ ಪರಮೇಶ್ವರ್ ಅವರು, ಸಿದ್ದರಾಮಯ್ಯ ಅವರ ಕಡೆಗಣನೆ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಲಾಗಿದೆ ಅಥವಾ ಕಡೆಗಣಿಸಲಾಗಿದೆ ಎಂಬುದು ಸಂಪೂರ್ಣ ಸುಳ್ಳು. ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿ ಆಗಮಿಸಿದ್ದರು. ಹೀಗಾಗಿ ಆಗ ಲಭ್ಯವಿದ್ದ ಹಿಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದರು ಎಂದು ಡಾ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಅಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆಸನಗಳ ಮೇಲೆ ಯಾವುದೇ ನಿರ್ದಿಷ್ಟ ವ್ಯಕ್ತಿಗಳ ಹೆಸರಿನ ಸ್ಟಿಕ್ಕರ್ ಅಥವಾ ಪಾಸ್ ಅಂಟಿಸಿರಲಿಲ್ಲ. ಯಾರೂ ಬೇಕಾದರೂ ಎಲ್ಲಿಯಾದರೂ ಕುಳಿತುಕೊಳ್ಳಲು ಮುಕ್ತ ಅವಕಾಶವಿತ್ತು ಎಂದು ಅವರು ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಪಕ್ಷದ ಅತ್ಯಂತ ಹಿರಿಯ ಹಾಗೂ ಉನ್ನತ ಮಟ್ಟದ ನಾಯಕರು. ಅವರನ್ನು ನಾವ್ಯಾರೂ ಆ ರೀತಿಯಲ್ಲಿ ನಡೆಸಿಕೊಳ್ಳಲು ಸಾಧ್ಯವೇ ಇಲ್ಲ. ಪಕ್ಷದಲ್ಲಿ ಅವರಿಗೆ ತಕ್ಕ ಗೌರವವಿದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರನ್ನು ಅವಮಾನಿಸುವುದಾಗಲಿ ಅಥವಾ ಉದ್ದೇಶಪೂರ್ವಕವಾಗಿ ಕಡೆಗಣಿಸುವುದಾಗಲಿ ಯಾವ ಕಾರಣಕ್ಕೂ ನಡೆದಿಲ್ಲ. ಸಣ್ಣ ವಿಚಾರವನ್ನು ತಿರುಚಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
