ಉತ್ತರ ಕನ್ನಡದಲ್ಲಿ ಮಳೆ ಆರ್ಭಟ : ಶಿರಸಿ ನಗರದ ಹಲವು ಬಡಾವಣೆಗಳು ಮುಳುಗಡೆ, ನಿವಾಸಿಗಳ ಪರದಾಟ

Edited By:

Updated on: Aug 01, 2026 | 2:33 PM

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಭಾರೀ ಮಳೆಯಿಂದ ಹಲವು ಬಡಾವಣೆಗಳು ಜಲಾವೃತವಾಗಿವೆ. ಸಮೃದ್ಧ ನಗರ, ಶ್ರೀಧರ ನಗರ, ಶ್ರೀರಾಮ ಕಾಲೋನಿ ಮತ್ತು ಅಯ್ಯಪ್ಪ ನಗರದ ಮನೆಗಳಿಗೆ ನೀರು ನುಗ್ಗಿದ್ದು, ಕೋಟೆ ಕೆರೆ ತುಂಬಿ ರಸ್ತೆಯಲ್ಲಿ ಹರಿಯುತ್ತಿದೆ. ಜಲಾವೃತಗೊಂಡ ರಸ್ತೆಗಳಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.

ಉತ್ತರ ಕನ್ನಡ, ಆ.1: ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಶಿರಸಿ ನಗರದ ಹಲವು ಬಡಾವಣೆಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಅವಾಂತರ ಸೃಷ್ಟಿಯಾಗಿದೆ. ಸಮೃದ್ಧ ನಗರ, ಶ್ರೀಧರ ನಗರ, ಶ್ರೀರಾಮ ಕಾಲೋನಿ ಹಾಗೂ ಅಯ್ಯಪ್ಪ ನಗರ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮನೆಗಳಲ್ಲಿ ನೀರು ನಿಂತ ಪರಿಣಾಮ ದಿನಬಳಕೆಯ ವಸ್ತುಗಳು ಹಾಳಾಗಿವೆ. ನಗರದ ಪ್ರಮುಖ ಕೋಟೆ ಕೆರೆ ತುಂಬಿ ಹರಿಯುತ್ತಿದ್ದು, ಕೆರೆಯ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ. ಇದರಿಂದ ಶಿರಸಿಯ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಜಲಾವೃತಗೊಂಡ ರಸ್ತೆಗಳಲ್ಲಿ ವಾಹನ ಸವಾರರು ಮತ್ತು ಪಾದಚಾರಿಗಳು ಸಂಚರಿಸಲು ಪರದಾಡುತ್ತಿದ್ದಾರೆ. ಹಲವು ವಾಹನಗಳು ನೀರಿನಲ್ಲಿ ಸಿಲುಕಿ ನಿಂತಿವೆ. ಮಳೆಯ ಅಬ್ಬರ ಹೀಗೆಯೇ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕ ಸ್ಥಳೀಯರಲ್ಲಿ ಮನೆಮಾಡಿದೆ. ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us