ಕಿವೀಸ್ ವೇಗಿಯ ಸೂಪರ್‌ಮ್ಯಾನ್‌​ ಕ್ಯಾಚ್​ಗೆ ಸಲ್ಯೂಟ್ ಹೊಡದ ಕ್ರಿಕೆಟ್ ಜಗತ್ತು; ವಿಡಿಯೋ ನೋಡಿ

|

Updated on: Jan 08, 2025 | 6:46 PM

Nathan Smith catch: ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಆಟಗಾರ ನಾಥನ್ ಸ್ಮಿತ್ ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಜಿಗಿದು ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಇದೀಗ ಈ ಕ್ಯಾಚ್​ನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 113 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಕಿವೀಸ್ ತಂಡ ನೀಡಿದ್ದ 256 ರನ್​ಗಳ ಗುರಿಗೆ ಉತ್ತರವಾಗಿ ಇಡೀ ಶ್ರೀಲಂಕಾ ತಂಡ ಕೇವಲ 142 ರನ್​ಗಳಿಗೆ ಆಲೌಟ್ ಆಯಿತು. ತಂಡದ ಪರ ಕಮಿಂದು ಮೆಂಡಿಸ್ ತಂಡದ ಪರ ಗರಿಷ್ಠ 64 ರನ್‌ಗಳ ಇನಿಂಗ್ಸ್‌ ಆಡಿದರೆ, ಉಳಿದಂತೆ ಆರು ಬ್ಯಾಟ್ಸ್‌ಮನ್‌ಗಳಿಗೆ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಹೀಗಾಗಿ ಲಂಕಾ ಪಡೆ ಪಂದ್ಯವನ್ನು ಸೋತಿದಲ್ಲದೆ, ಸರಣಿಯನ್ನು ಕಳೆದುಕೊಂಡಿತು. ಇತ್ತ ಲಂಕಾ ತಂಡವನ್ನು ಅಲ್ಪ ರನ್​ಗಳಿಗೆ ಆಲೌಟ್ ಮಾಡುವಲ್ಲಿ ನ್ಯೂಜಿಲೆಂಡ್ ತಂಡದ ಫೀಲ್ಡರ್​ಗಳು ನೀಡಿದ ಅಮೋಘ ಪ್ರದರ್ಶನ ಪ್ರಮುಖ ಕಾರಣವಾಗಿತ್ತು. ಅದರಲ್ಲೂ ತಂಡದ ವೇಗಿ ನಾಥನ್ ಸ್ಮಿತ್ ಇನಿಂಗ್ಸ್​ನ 29ನೇ ಓವರ್​ನಲ್ಲಿ ಹಿಡಿದ ಅದೊಂದು ಅದ್ಭುತ ಕ್ಯಾಚ್​ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸ್ಮಿತ್, ಬೌಂಡರಿ ಲೈನ್ ಬಳಿ ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಜಿಗಿದು ಅದ್ಭುತ ಕ್ಯಾಚ್ ಹಿಡಿದರು.

ಸ್ಮಿತ್ ಫ್ಲೈಯಿಂಗ್ ಕ್ಯಾಚ್

ವಾಸ್ತವವಾಗಿ ಶ್ರೀಲಂಕಾ 131 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತ್ತು. ಮೆಂಡಿನ್ಸ್ ಔಟಾಗುವುದರೊಂದಿಗೆ ತಂಡದ ಗೆಲುವಿನ ನಿರೀಕ್ಷೆ ಕೊನೆಗೊಂಡಿತು. ಆದಾಗ್ಯೂ, ಇದರ ಹೊರತಾಗಿಯೂ, ತಂಡದ ಬ್ಯಾಟ್ಸ್‌ಮನ್‌ಗಳು ನಿರಂತರವಾಗಿ ದೊಡ್ಡ ಹೊಡೆತಗಳನ್ನು ಆಡಲು ಪ್ರಯತ್ನಿಸುತ್ತಿದ್ದರು. ಇನಿಂಗ್ಸ್‌ನ 29ನೇ ಓವರ್‌ನ ಕೊನೆಯ ಎಸೆತದಲ್ಲಿ ಶ್ರೀಲಂಕಾದ ಬ್ಯಾಟ್ಸ್‌ಮನ್ ಇಶಾನ್ ಮಾಲಿಂಗ ವಿಲಿಯಂ ಓ ರೂರ್ಕ್ ಅವರ ಚೆಂಡನ್ನು ಬಲವಾಗಿ ಹೊಡೆದರು.

ಹೀಗಾಗಿ ಚೆಂಡು ಸುಲಭವಾಗಿ ಬೌಂಡರಿ ಗೆರೆ ದಾಟುತ್ತದೆ ಎಂದು ಕಾಣುತ್ತಿತ್ತು. ಆದರೆ, ಬೌಂಡರಿ ಗೆರೆಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನಾಥನ್ ಸ್ಮಿತ್ ಚೆಂಡಿನತ್ತ ವೇಗವಾಗಿ ಓಡಿ ಸೂಪರ್ ಮ್ಯಾನ್​ನಂತೆ ಗಾಳಿಯಲ್ಲಿ ಡೈವ್ ಮಾಡಿ ಅಚ್ಚರಿಯ ಕ್ಯಾಚ್ ಪಡೆದರು. ಸ್ಮಿತ್ ಅವರ ಫೀಲ್ಡಿಂಗ್ ಪ್ರಯತ್ನವನ್ನು ನೋಡಿ ಕಾಮೆಂಟೇಟರ್‌ಗಳು ಕೂಡ ಸಂಪೂರ್ಣವಾಗಿ ಆಶ್ಚರ್ಯಚಕಿತರಾದರು.

ಲಂಕಾ ಬ್ಯಾಟಿಂಗ್ ವೈಫಲ್ಯ

256 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡವು ಅತ್ಯಂತ ಕೆಟ್ಟ ಆರಂಭವನ್ನು ಹೊಂದಿತ್ತು. ಹೀಗಾಗಿ ಕೇವಲ 22 ರನ್ ಗಳಿಸುವಷ್ಟರಲ್ಲಿ ತಂಡದ ನಾಲ್ಕು ವಿಕೆಟ್‌ಗಳು ಪತನಗೊಂಡವು. ಇದಾದ ಬಳಿಕ ಕಾಮಿಂದು ಮೆಂಡಿಸ್ ಜತೆಗೂಡಿದ ಜನಿತ್ ಲಿಯಾನಗೆ ಐದನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಕಿವೀಸ್ ಪರ ವಿಲಿಯಂ ಒ’ರೂರ್ಕ್ 6.2 ಓವರ್​ಗಳಲ್ಲಿ 31 ರನ್ ನೀಡಿ ಮೂರು ವಿಕೆಟ್ ಪಡೆದರೆ, ಜಾಕೋಬ್ ಡಫಿ ಎರಡು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ