ಸ್ಮಿತ್ ಸಿಡಿಲಬ್ಬರ… ಒಂದೇ ಓವರ್ನಲ್ಲಿ ದಾಖಲೆ ಉಡೀಸ್
Sydney Sixers vs Sydney Thunder: ಬಿಗ್ ಬ್ಯಾಷ್ ಲೀಗ್‌ನ 37ನೇ ಪಂದ್ಯದಲ್ಲಿ ಇಬ್ಬರು ಅನುಭವಿ ದಾಂಡಿಗರು ಶತಕ ಸಿಡಿಸಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಡೇವಿಡ್ ವಾರ್ನರ್ ಶತಕ ಬಾರಿಸಿದರೆ, ದ್ವಿತೀಯ ಇನಿಂಗ್ಸ್ ನಲ್ಲಿ ಸ್ಟೀವ್ ಸ್ಮಿತ್ ಸೆಂಚುರಿ ಸಿಡಿಸಿದ್ದಾರೆ. ಈ ಶತಕದೊಂದಿಗೆ ಸ್ಮಿತ್ ಭರ್ಜರಿ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.
ಬಿಗ್ ಬ್ಯಾಷ್ ಲೀಗ್ನಲ್ಲಿ ಸ್ಟೀವ್ ಸ್ಮಿತ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಒಂದೇ ಓವರ್ನಲ್ಲಿ ಅತ್ಯಧಿಕ ರನ್ ಕಲೆಹಾಕುವ ಮೂಲಕ. ಎಸ್ಸಿಜಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಹಾಗೂ ಸಿಡ್ನಿ ಥಂಡರ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಸಿಡ್ನಿ ಥಂಡರ್ ಕಲೆಹಾಕಿದ್ದು ಬರೋಬ್ಬರಿ 189 ರನ್ಗಳು.
ಈ ಗುರಿ ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್ ಪರ ಸ್ಟೀವ್ ಸ್ಮಿತ್ ಅಕ್ಷರಶಃ ಅಬ್ಬರಿಸಿದರು. ಅದರಲ್ಲೂ ರಯಾನ್ ಹ್ಯಾಡ್ಲಿ ಎಸೆದ 11ನೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ 4 ಸಿಕ್ಸ್ ಸಿಡಿಸಿದರು. ಅಷ್ಟೇ ಅಲ್ಲದೆ ಈ ಓವರ್ನಲ್ಲಿ ಬರೋಬ್ಬರಿ 32 ರನ್ ಕಲೆಹಾಕುವ ಮೂಲಕ ಸ್ಮಿತ್ ಹೊಸ ಇತಿಹಾಸ ನಿರ್ಮಿಸಿದರು.
ಅಂದರೆ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಒಂದೇ ಓವರ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಸ್ಟೀವ್ ಸ್ಮಿತ್ ಪಾಲಾಗಿದೆ. ಅತ್ತ ಬಿಬಿಎಲ್ನಲ್ಲಿ ಅತೀ ದುಬಾರಿ ಓವರ್ ಎಸೆದ ಹೀನಾಯ ದಾಖಲೆ ರಯಾನ್ ಹ್ಯಾಡ್ಲಿ ಹೆಸರಿಗೆ ಸೇರ್ಪಡೆಯಾಗಿದೆ.
ಇದಕ್ಕೂ ಮುನ್ನ ಬಿಗ್ ಬ್ಯಾಷ್ ಲೀಗ್ನಲ್ಲಿ ಒಂದೇ ಓವರ್ನಲ್ಲಿ ಅತೀ ಹೆಚ್ಚು ರನ್ಗಳಿಸಿದ ದಾಖಲೆ ಆರೋನ್ ಫಿಂಚ್ ಹೆಸರಿನಲ್ಲಿತ್ತು.
2023 ರಲ್ಲಿ ಆ್ಯಂಡ್ರ್ಯೂ ಟೈ ಓವರ್ನಲ್ಲಿ ಫಿಂಚ್ ಬರೋಬ್ಬರಿ 31 ರನ್ ಬಾರಿಸಿದ್ದರು. ಇದೀಗ 32 ರನ್ಗಳಿಸುವ ಮೂಲಕ ಸ್ಟೀವ್ ಸ್ಮಿತ್ ಬಿಗ್ ಬ್ಯಾಷ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇನ್ನು ಈ ಅಬ್ಬರದೊಂದಿಗೆ ಸ್ಟೀವ್ ಸ್ಮಿತ್ ಕೇವಲ 41 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದ ನೆರವಿನೊಂದಿಗೆ ಸಿಡ್ನಿ ಸಿಕ್ಸರ್ಸ್ ತಂಡವು 17.2 ಓವರ್ಗಳಲ್ಲಿ 191 ರನ್ಗಳಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
