BBL 2025: ಬೌಲ್ಡ್ ಆಗುವುದನ್ನು ತಪ್ಪಿಸಿ ಅರ್ಧಶತಕ ಸಿಡಿಸಿದ ಸ್ಟೀವ್ ಸ್ಮಿತ್

| Updated By: ಝಾಹಿರ್ ಯೂಸುಫ್

Updated on: Jan 16, 2025 | 8:53 AM

Big Bash League 2024-25: ಬಿಗ್ ಬ್ಯಾಷ್ ಲೀಗ್​ನ 35ನೇ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ತಂಡವು 20 ಓವರ್​​ಗಳಲ್ಲಿ 182 ರನ್ ಕಲೆಹಾಕಿದರೆ, ಈ ಗುರಿಯನ್ನು ಸಿಡ್ನಿ ಸಿಕ್ಸರ್ಸ್ ತಂಡವು 19.5 ಓವರ್​​ಗಳಲ್ಲಿ ಚೇಸ್ ಮಾಡಿ 3 ವಿಕೆಟ್​ಗಳ ಜಯ ಸಾಧಿಸಿತು.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಲ್ಲಿ ಸ್ಟೀವ್ ಸ್ಮಿತ್ ಬೌಲ್ಡ್ ಆಗುವುದನ್ನು ತಪ್ಪಿಸಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಬಿಎಲ್​ನ 35ನೇ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು.

ಈ ಗುರಿ ಬೆನ್ನತ್ತಲು ಸಿಡ್ನಿ ಸಿಕ್ಸರ್ಸ್ ಪರ ಸ್ಟೀವ್ ಸ್ಮಿತ್ ಹಾಗೂ ಜೋಶ್ ಫಿಲಿಪ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಫಿಲಿಪ್ (8) ಬೇಗನೆ ಔಟಾದರೂ, ಮತ್ತೊಂದೆಡೆ ಸ್ಟೀವ್ ಸ್ಮಿತ್ ಕ್ರೀಸ್ ಕಚ್ಚಿ ನಿಂತಿದ್ದರು. ಆದರೆ ಸ್ಮಿತ್ ಪವರ್​ ಪ್ಲೇನಲ್ಲೇ ಬೌಲ್ಡ್ ಆಗಬೇಕಿತ್ತು.

ಹೆನ್ರಿ ಥಾರ್ಟನ್‌ ಎಸೆದ 4ನೇ ಓವರ್​ನಲ್ಲಿ ಸ್ಮಿತ್ ಸ್ವಲ್ಪದಲ್ಲೇ ಬೌಲ್ಡ್ ಆಗುತ್ತಿದ್ದರು. ಆದರೆ ಕ್ಷಣಾರ್ಧದಲ್ಲೇ ಚೆಂಡನ್ನು ತಡೆಯುವ ಮೂಲಕ ಸ್ಟೀವ್ ಸ್ಮಿತ್ ಬೇಗನೆ ಔಟ್ ಆಗುವುದನ್ನು ತಪ್ಪಿಸಿದರು.  ಆ ಬಳಿಕ ಇನಿಂಗ್ಸ್ ಕಟ್ಟಿದ ಸ್ಟೀವ್ ಸ್ಮಿತ್ 31 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 52 ರನ್ ಬಾರಿಸಿದರು.

ಈ ಅರ್ಧಶತಕದ ನೆರವಿನಿಂದ ಸಿಡ್ನಿ ಸಿಕ್ಸರ್ಸ್ ತಂಡವು 19.5 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ 3 ವಿಕೆಟ್​ಗಳ ಜಯ ಸಾಧಿಸಿತು.  ಇದೀಗ ಸ್ಟೀವ್ ಸ್ಮಿತ್ ಅವರ ಸೂಪರ್ ಸೇವ್ ವಿಡಿಯೋ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಆಸ್ಟ್ರೇಲಿಯಾ ದಾಂಡಿಗನ ಟೈಮಿಂಗ್​ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.