ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಟೀಮ್ ಇಂಡಿಯಾ
T20 World Cup 2024: ಟಿ20 ವಿಶ್ವಕಪ್ 2024 ರ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿರುವ ಟೀಮ್ ಇಂಡಿಯಾ ಗುರುವಾರ ಮುಂಜಾನೆ ಭಾರತಕ್ಕೆ ಆಗಮಿಸಿದೆ. ಈ ಆಗಮನದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ಬಳಿಕ ಭಾರತ ತಂಡವು ಮುಂಬೈನತ್ತ ಪ್ರಯಾಣ ಬೆಳೆಸಿದೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಇಂದು (ಜು.4) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿದ್ದಾರೆ. ಬಾರ್ಬಡೋಸ್ನಿಂದ ಗುರುವಾರ ಮುಂಜಾನೆ ದೆಹಲಿಗೆ ಬಂದಿಳಿದ ಟೀಮ್ ಇಂಡಿಯಾ ಆಟಗಾರರು ಮತ್ತು ಸಿಬ್ಬಂದಿಗಳು, 11 ಗಂಟೆಗೆ ನವದೆಹಲಿಯ ಲೋಕ್ ಕಲ್ಯಾಣ್ ಮಾರ್ಗ್‌ನಲ್ಲಿರುವ ಪ್ರಧಾನಿ ನಿವಾಸಕ್ಕೆ ಆಗಮಿಸಿದರು. ಈ ವೇಳೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಕಾರ್ಯದರ್ಶಿ ಜಯ್ ಶಾ ಕೂಡ ಹಾಜರಿದ್ದರು.
ವಿಶ್ವಕಪ್ ಗೆದ್ದು ಆಗಮಿಸಿದ ಟೀಮ್ ಇಂಡಿಯಾವನ್ನು ಸ್ವಾಗತಿಸಿದ ಪ್ರಧಾನಿ ಮೋದಿ, ಕೆಲ ಹೊತ್ತು ಕುಶಲೋಪರಿ ನಡೆಸಿದರು. ಅಲ್ಲದೆ ಆ ಬಳಿಕ ಟೀಮ್ ಇಂಡಿಯಾ ಆಟಗಾರರು ಪ್ರಧಾನಿಯೊಂದಿಗೆ ಟಿ20 ವಿಶ್ವಕಪ್ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದೀಗ ಭಾರತ ತಂಡದ ಆಟಗಾರರೊಂದಿಗಿನ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಟೀಮ್ ಇಂಡಿಯಾ ಆಟಗಾರರು ಮುಂಬೈಗೆ ತೆರಳಿದ್ದಾರೆ. ಇಂದು ಸಂಜೆ ಭಾರತ ತಂಡ ವಿಜಯಯಾತ್ರೆ ನಡೆಯಲಿದ್ದು, ಇದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ದೆಹಲಿಯಿಂದ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ. ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ಏರ್ ಇಂಡಿಯಾ ಕಟ್ಟಡದಿಂದ ಪ್ರಾರಂಭವಾಗಲಿರುವ ಈ ವಿಜಯಯಾತ್ರೆಯು ವಾಂಖೆಡೆ ಸ್ಟೇಡಿಯಂನಲ್ಲಿ ಕೊನೆಗೊಳ್ಳಲಿದೆ.
ಇದಾದ ಬಳಿಕ ವಾಂಖೆಡೆ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾದ ವಿಜಯೋತ್ಸವ ಜರುಗಲಿದೆ. ಇದೇ ವೇಳೆ ಭಾರತ ತಂಡಕ್ಕೆ 125 ಕೋಟಿ ರೂ.ಗಳ ಬಹುಮಾನವನ್ನು ಬಿಸಿಸಿಐ ಹಸ್ತಾಂತರಿಸಲಿದೆ.