10 ತಿಂಗಳಿಂದ ಬಾಡಿಗೆ ಕಟ್ಟಿಲ್ಲ ಎಂದು ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದ ಮನೆ ಮಾಲೀಕ

Edited By: ಸಾಧು ಶ್ರೀನಾಥ್​

Updated on: Sep 08, 2023 | 11:15 AM

ಹೊಸದುರ್ಗದಲ್ಲಿ ಬಾಡಿಗೆ ಹಣ ಬಾಕಿ ಹಿನ್ನೆಲೆ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಲಾಗಿದೆ. ಇದರಿಂದ ಎಚ್ಚೆತ್ತ ಸಿಡಿಪಿಓ ಅಭಿಲಾಷಾ ಅವರು ಸ್ಥಳಕ್ಕೆ ಭೇಟಿ‌ ನೀಡಿ, ಪರಿಶೀಲನೆ ನಡೆದಿದ್ದಾರೆ. ಆ ವೇಳೆ ಪೋಷಕರು ಸಿಡಿಪಿಓಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದ್ರಭದಲ್ಲಿ ಅಂಗನವಾಡಿ ಮಕ್ಕಳು, ಸಿಬ್ಬಂದಿ ಕೆಲ ಹೊತ್ತು ಕಟ್ಟಡದ ಹೊರಗೆ ನಿಂತಿದ್ದರು.

ಚಿತ್ರದುರ್ಗ, ಸೆಪ್ಟೆಂಬರ್​ 8 : ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಅಂಗನವಾಡಿ (Anganwadi) ಕೇಂದ್ರಕ್ಕೆ ಕಳೆದ 10ತಿಂಗಳಿಂದ ಸರ್ಕಾರದಿಂದ ಬಾಡಿಗೆ (Rent) ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕರು ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿದ ಘಟನೆ ಹೊಸದುರ್ಗ ಪಟ್ಟಣದ (Hosdurga) 17ನೇ ವಾರ್ಡ್ ನಲ್ಲಿ ಗುರುವಾರ ನಡೆದಿದೆ. ಅಂಗನವಾಡಿ ಕೇಂದ್ರಕ್ಕೆ ಬಾಡಿಗೆ ನೀಡಿದ ಕಟ್ಟಡಕ್ಕೆ ಕಳೆದ 10 ತಿಂಗಳಿಂದ ಬಾಡಿಗೆ ಹಣ ಬಂದಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಂಬಂದಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಏನು ಪ್ರಯೋಜನ ಆಗಿಲ್ಲ. ಹೀಗಾಗಿ ಬೇಸತ್ತು ಇಂದು ಕಟ್ಟಡಕ್ಕೆ ಬೀಗ ಹಾಕಿದ್ದೇನೆ ಎಂದು ಕಟ್ಟಡದ ಮಾಲೀಕ ಸಾದಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಗನವಾಡಿ ಕಟ್ಟಡಕ್ಕೆ ಕಟ್ಟಡ ಮಾಲೀಕ ಸಾದಿಕ್ ಬೀಗ ಹಾಕಿದ್ದ ಕಾರಣ ಅಂಗನವಾಡಿಗೆ ಬಂದಿದ್ದ ಮಕ್ಕಳು ಮತ್ತು ಸಿಬ್ಬಂದಿ ಕೆಲ ಹೊತ್ತು ಬೀದಿಯಲ್ಲೇ ನಿಲ್ಲಬೇಕಾಯಿತು. ಮಕ್ಕಳನ್ನು ಬೀದಿ ನಿಲ್ಲಿಸ ಬೇಡಿ ಬೀಗ ತೆಗೆಯಿರಿ ನಿಮ್ಮ ಬಾಡಿಗೆ ವ್ಯವಹಾರ ಇಲಾಖೆಯೊಂದಿಗೆ ಮಾಡಿಕೊಳ್ಳಿ ಎಂದು ಪೋಷಕರು ಮನವೊಲಿಸಲು ಯತ್ನಿಸಿದರು. ಕಟ್ಟಡದ ಮಾಲೀಕರು ಮಾತ್ರ ಪೋಷಕರ ಮಾತಿಗೆ ಬಗ್ಗಲಿಲ್ಲ. ನಮ್ಮ ಬದುಕಿಗೆ ಕಟ್ಟಡದ ಬಾಡಿಗೆ ಹಣವೇ ಆಸರೆ ಆಗಿದೆ. 10ತಿಂಗಳಿಂದ ಬಾಡಿಗೆ ಹಾಣವೇ ಇಲ್ಲ ಎಂದರೆ ಹೇಗೆ ಸಹಿಸಿಕೊಳ್ಳುವುದೆಂದು ಪ್ರಶ್ನಿಸಿದ್ದಾರೆ. ನಂತರ ಪುರಸಭಾ ಸದಸ್ಯರಾದ ಮಂಜುನಾಥ್ ಹಾಗೂ ನಾಗರಾಜ್ ಸ್ಥಳಕ್ಕೆ ಆಗಮಿಸಿ ಕಟ್ಟಡದ ಮಾಲೀಕರೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದ್ದು ಬೀಗ ತೆಗೆಸಿದರು.

ಸಿಡಿಪಿಓ ಅಭಿಲಾಷಾ ಸ್ಥಳಕ್ಕೆ ಆಗಮಿಸಿದಾಗ ಪೋಷಕರು ವಾಗ್ವಾದ ನಡೆಸಿದರು. ನಿಮ್ಮ ಸೂಪರ್ ವೈಸರ್ 1 ಕಿಲೋ ಮೀಟರ್ ದೂರ ಇರುವ ಕೇಂದ್ರಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಚಿಕ್ಕ ಮಕ್ಕಳನ್ನು ರಸ್ತೆ ದಾಟಿಸಿಕೊಂಡು ಹೋಗುವುದಾದರೂ ಹೇಗೇ. ಮಕ್ಕಳ ಜೀವದ ಬಗ್ಗೆ ಜವಾಬ್ದಾರಿ ಇರಲಿ. ಸೂಪರ್ ವೈಸರ್ ಬೇಜವಬ್ದಾರಿಯಿಂದ ಮಾತನಾಡುತ್ತಾರೆ ಎಂದು ಪೋಷಕರು ದೂರಿದರು.

Also Read: ಚಿಣ್ಣರ ಅಂಗಳ ಅಂಗನವಾಡಿಗಳಿಗೆ ಆಸರೆಯಾಗಲು ಮುಂದಾದ ಗುಂಡೂರಾವ್ ಪುತ್ರಿ ಅನನ್ಯ ರಾವ್

ಹೊಸದುರ್ಗ ಪಟ್ಟಣದಲ್ಲಿ 23 ಬಾಡಿಗೆ ಕಟ್ಟಡ ಇವೆ. ಗ್ರಾಮಾಂತರ ಪ್ರದೇಶ 12 ಬಾಡಿಗೆ ಕಟ್ಟಡ ಇವೆ. ಬಾಡಿಗೆ ಕಟ್ಟಲು ಬಜೆಟ್ ಇರಲಿಲ್ಲ ಆಗಸ್ಟ್ ವರೆಗೂ ಕಾಲಾವಕಾಶ ಕೊಡುವಂತೆ ಹೇಳಲಾಗಿತ್ತು. 10 ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲ ಎನ್ನುವುದು ನಿಜ. ನಿನ್ನೆ ದಿನ ರಾತ್ರಿ ಅನುದಾನ ಬಿಡುಗಡೆ ಆಗಿದೆ. ನಾಳೆ ಬಾಡಿಗೆ ಪಾವತಿಸುತ್ತೇವೆ ಎಂದು ಸಿಡಿಪಿಓ ಅಭಿಲಾಷಾ ಭರವಸೆ ನೀಡಿದರು.

ಕಳೆದ 10 ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲ. ವಿದ್ಯುತ್‌ಮತ್ತು ನೀರು ಸಹ ನಾವು ಉಚಿತವಾಗಿ ನೀಡಿದ್ದೇವೆ. ಶೀಘ್ರ ಬಾಡಿಗೆ ಪಾವತಿ ಆಗದಿದ್ದರೆ‌ ಮತ್ತೆ ಬೀಗ ಹಾಕಬೇಕಾಗುತ್ತದೆ ಎಂದು ಕಟ್ಟಡ ಮಾಲೀಕ ಸಾಧಿಕ್ ಎಚ್ಚರಿಸಿದ್ದಾರೆ.

ಇಷ್ಟೆಲ್ಲಾ ಸಮಸ್ಯೆ ಆಗಿದ್ದರೂ ಹಿರಿಯ ಅಧಿಕಾರಿಗಳು ಕೇಂದ್ರಕ್ಕೆ ಬಂದಿಲ್ಲ. ಜನಪ್ರತಿನಿಧಿ ಆಗಿ ನಾವು ಜನರಿಗೆ ಉತ್ತರ ಕೊಡಬೇಕಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮುಂಜಾಗೃತೆ ಕ್ರಮ ವಹಿಸಬೇಕು. ಇಂಥ ಘಟನೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂದು ಪುರಸಭಾ ಸದಸ್ಯ ಮಂಜುನಾಥ್‌‌ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Sep 08, 2023 08:32 AM
Follow Us
Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More