ದತ್ತ ಜಯಂತಿ ಶೋಭಾಯಾತ್ರೆ: ಚಿಕ್ಕಮಗಳೂರಿನಲ್ಲಿ ಪೊಲೀಸರು ಹೈ ಅಲರ್ಟ್, ಬಿಗಿ ಬಂದೋಬಸ್ತ್
ದತ್ತಜಯಂತಿ ಆಚರಣೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಕಲ್ಪಿಸಿರುವುದಾಗಿ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಅಮ್ಟೆ ತಿಳಿಸಿದ್ದಾರೆ. ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಇಂದು ಶೋಭಾಯಾತ್ರೆ ನಡೆಯಲಿದ್ದು, ಪ್ರಚೋದನಕಾರಿ ಘೋಷಣೆ ಕೂಗಿದರೆ ಸುಮೋಟೋ ಕೇಸ್ ದಾಖಲಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಶಾಂತಿ–ಸೌಹಾರ್ದ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು, ಡಿಸೆಂಬರ್ 3: ಇನಾಂ ದತ್ತಾತ್ರೇಯ ಬಾಬಾ ಬುಡನ್‌ಸ್ವಾಮಿ ದರ್ಗಾ ವಿವಾದದ ಹಿನ್ನೆಲೆಯಲ್ಲಿ ದತ್ತಜಯಂತಿ ಆಚರಣೆ ಸಂಬಂಧ ಚಿಕ್ಕಮಗಳೂರಿನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಇಂದು ಶೋಭಾಯಾತ್ರೆ ನಡೆಯಲಿದ್ದು, ಡಿಸೆಂಬರ್ 4ರಂದು ದತ್ತಪಾದುಕೆ ದರ್ಶನ ಕಾರ್ಯಕ್ರಮ ಇರುವ ಕಾರಣ ಪೊಲೀಸ್ ಇಲಾಖೆ ದೊಡ್ಡ ಮಟ್ಟದ ಸಿದ್ಧತೆ ಕೈಗೊಂಡಿದೆ. ಭದ್ರತೆ ಬಗ್ಗೆ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಅಮ್ಟೆ ‘ಟಿವಿ9’ಗೆ ಮಾಹಿತಿ ನೀಡಿದ್ದು, ಜಿಲ್ಲೆಯಾದ್ಯಂತ 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ RAF ಹಾಗೂ SAF ಪಡೆಗಳನ್ನು ಸಹ ಕರೆದೊಯ್ಯಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ರೂಟ್‌ಮಾರ್ಚ್ ನಡೆಸಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಎರಡು ಸಮುದಾಯದವರನ್ನೂ ಒಳಗೊಂಡ ಸಭೆಯನ್ನು ನಡೆಸಿ ಶಾಂತಿ–ಸೌಹಾರ್ದ ಕಾಪಾಡಲು ಮನವಿ ಮಾಡಲಾಗಿದೆ. ಶೋಭಾಯಾತ್ರೆ ಅಥವಾ ಕಾರ್ಯಕ್ರಮದ ವೇಳೆ ಪ್ರಚೋದನಕಾರಿ ಘೋಷಣೆ ಕೂಗಿದರೆ ಸ್ವಯಂಪ್ರೇರಿತ ಕೇಸ್ ದಾಖಲಿಸಲಾಗುತ್ತದೆ ಎಂದು ಎಸ್‌ಪಿ ವಿಕ್ರಮ್ ಅಮ್ಟೆ ಎಚ್ಚರಿಕೆ ನೀಡಿದ್ದಾರೆ.
