ಸಿಎಂ ಅಲ್ಲ ನಾನು ಇಲ್ಲಿ ಅಧ್ಯಕ್ಷ: ಮೈಕ್ ಆಫ್ ಮಾಡಿದಕ್ಕೆ ಸೌಂಡ್ ಆಪರೇಟರ್‌ ಮೇಲೆ ಹಲ್ಲೆ ಮಾಡಿದ ಕಾಂಗ್ರೆಸ್​​ ಶಾಸಕ

Updated on: Nov 15, 2026 | 7:11 PM

ಉತ್ತರಾಖಂಡದ ಜೌಲ್ಜಿಬಿ ಜಾತ್ರೆಯಲ್ಲಿ ರಾಜಕೀಯ ಹೈಡ್ರಾಮಾ ನಡೆದಿದೆ. ಮಾತನಾಡಲು ಅವಕಾಶ ಸಿಗದಿದ್ದಕ್ಕೆ ಸಿಟ್ಟಾದ ಕಾಂಗ್ರೆಸ್ ಶಾಸಕ ಹರೀಶ್ ಸಿಂಗ್ ಧಾಮಿ, ಮೈಕ್ ಎಸೆದು ಸೌಂಡ್ ಸಿಬ್ಬಂದಿಯನ್ನು ನಿಂದಿಸಿದರು. ಸಿಎಂ ಪುಷ್ಕರ್ ಸಿಂಗ್ ಧಾಮಿ ವಿರುದ್ಧ 'ಹೇಡಿ' ಎಂದೂ ಸವಾಲು ಹಾಕಿದರು. ಈ ವರ್ತನೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಸಕರ ವಿರುದ್ಧ ಆರೋಪ ಮಾಡಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಿತೋರಗಢ, ನ.15: ಉತ್ತರಾಖಂಡದ ಪಿತೋರಗಢ ಜಿಲ್ಲೆಯ ಐತಿಹಾಸಿಕ ಜೌಲ್ಜಿಬಿ ಜಾತ್ರೆಯ ವೇದಿಕೆಯಲ್ಲಿ ಶನಿವಾರ ಭಾರೀ ರಾಜಕೀಯ ಹೈಡ್ರಾಮಾ ನಡೆದಿದೆ. ಕಾರ್ಯಕ್ರಮದಲ್ಲಿ ತಮಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ತೀವ್ರ ಆಕ್ರೋಶಗೊಂಡ ಕಾಂಗ್ರೆಸ್ ಶಾಸಕ ಹರೀಶ್ ಸಿಂಗ್ ಧಾಮಿ, ಸಾರ್ವಜನಿಕ ವೇದಿಕೆಯಲ್ಲೇ ಮೈಕ್ರೊಫೋನ್ (ಮೈಕ್) ಎಸೆದು, ಸೌಂಡ್ ಸಿಸ್ಟಮ್ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೌಲ್ಜಿಬಿ ಜಾತ್ರೆಯ ಅಧ್ಯಕ್ಷರಾಗಿದ್ದ ಶಾಸಕ ಹರೀಶ್ ಧಾಮಿ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭಾಗವಹಿಸಿದ್ದ ಕಾರ್ಯಕ್ರಮ ಮುಗಿದು ಸಿಎಂ ವೇದಿಕೆಯಿಂದ ತೆರಳಿದ ಬೆನ್ನಲ್ಲೇ ತಾಳ್ಮೆ ಕಳೆದುಕೊಂಡಿದ್ದಾರೆ. ತಾವು ಜಾತ್ರೆಯ ಅಧ್ಯಕ್ಷರಾಗಿದ್ದರೂ ಸಭೆಯನ್ನುದ್ದೇಶಿಸಿ ಮಾತನಾಡಲು ಅವಕಾಶ ನೀಡದೆ, ತಮ್ಮ ಮೈಕ್ ಅನ್ನು ಸ್ವಿಚ್ ಆಫ್ ಮಾಡಲಾಗಿದೆ ಎಂದು ಆರೋಪಿಸಿ ಶಾಸಕರು ಬೆಂಬಲಿಗರೊಂದಿಗೆ ವೇದಿಕೆ ಏರಿ ಗದ್ದಲ ಎಬ್ಬಿಸಿದ್ದಾರೆ. ಕೋಪದ ಭರದಲ್ಲಿ ಶಾಸಕ ಹರೀಶ್ ಧಾಮಿ ವೇದಿಕೆ ಮೇಲಿದ್ದ ಮೈಕ್ ಎಸೆದು ಆಕ್ರೋಶ ಹೊರಹಾಕುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಶಾಸಕರ ಬೆಂಬಲಿಗರೂ ಪ್ರತಿಭಟನೆಗೆ ಇಳಿದಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ವೇದಿಕೆಯಲ್ಲಿ ಆಕ್ರೋಶ ಹೊರಹಾಕಿದ ಹರೀಶ್ ಧಾಮಿ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು “ಹೇಡಿ” ಎಂದು ಕರೆಯುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. “ತಾಕತ್ತಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಧಾರ್ಚುಲಾ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ” ಎಂದು ಸಿಎಂಗೆ ಸವಾಲು ಹಾಕಿದ್ದಾರೆ. ಪಕ್ಷ ಸೂಚಿಸಿದರೆ ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿಯಾದರೂ ಮುಖ್ಯಮಂತ್ರಿಯನ್ನು ಸೋಲಿಸುವುದಾಗಿ ಅವರು ಗುಡುಗಿದ್ದಾರೆ. ಕಾಂಗ್ರೆಸ್ ಶಾಸಕರ ಈ ವರ್ತನೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜಿಲ್ಲಾ ಸಚಿವ ರಘುವೀರ್ ಸಿಂಗ್ ಪ್ರತಿಕ್ರಿಯಿಸಿ, “ಕಳೆದ ಐದು ವರ್ಷಗಳಲ್ಲಿ ತಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಹರೀಶ್ ಧಾಮಿ, ಚುನಾವಣಾ ಸೋಲಿನ ಭೀತಿಯಿಂದ ಈ ರೀತಿ ವರ್ತಿಸುತ್ತಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ಅವರ ಈ ನಡೆ ಅಕ್ಷಮ್ಯ” ಎಂದು ಕಿಡಿಕಾರಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More