ಮಾರ್ಗಮಧ್ಯೆ ತುಂಬು ಗರ್ಭಿಣಿಗೆ ಹೆರಿಗೆ ನೋವು: ನೇರ ಆಸ್ಪತ್ರೆಗೆ ಬಸ್ ಚಲಾಯಿಸಿ ಸಮಯಪ್ರಜ್ಞೆ ಮೆರೆದ ಚಾಲಕ ರಾಜೇಶ್
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಖಾಸಗಿ ಬಸ್ ಸಿಬ್ಬಂದಿ ತಮ್ಮ ಸಮಯಪ್ರಜ್ಞೆ ಮತ್ತು ಮಾನವೀಯತೆ ಮೆರೆದಿದ್ದಾರೆ. ಚಲಿಸುತ್ತಿದ್ದ ಬಸ್ನಲ್ಲಿ ತುಂಬು ಗರ್ಭಿಣಿಗೆ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡಾಗ, ಚಾಲಕ ಮತ್ತು ನಿರ್ವಾಹಕರು ಬಸ್ ಅನ್ನು ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ತಾಯಿ ಮತ್ತು ಮಗುವಿನ ಜೀವ ಉಳಿಸಿದ್ದಾರೆ. ಅವರ ಸಮಯೋಚಿತ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿರಾಜಪೇಟೆ, ಅ.30: ಚಲಿಸುತ್ತಿದ್ದ ಬಸ್ನಲ್ಲಿ ತುಂಬು ಗರ್ಭಿಣಿಯೊಬ್ಬರಿಗೆ ಹಠಾತ್ತಾಗಿ ಹೆರಿಗೆ ನೋವು ಕಾಣಿಸಿಕೊಂಡಾಗ, ಸಮಯ ಪ್ರಜ್ಞೆ ಹಾಗೂ ಮಾನವೀಯತೆ ಮೆರೆದ ಖಾಸಗಿ ಬಸ್ ಸಿಬ್ಬಂದಿ ಬಸ್ಅನ್ನು ನೇರವಾಗಿ ಸರ್ಕಾರಿ ಆಸ್ಪತ್ರೆಯ ಆವರಣಕ್ಕೇ ಕೊಂಡೊಯ್ದು ತಾಯಿ-ಮಗುವಿನ ಜೀವ ಉಳಿಸಿದ ಶ್ಲಾಘನೀಯ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ. ಖಾಸಗಿ ಬಸ್ ಚಾಲಕ ರಾಜೇಶ್ ಹಾಗೂ ಕಂಡಕ್ಟರ್ ಕಿಶನ್ ತಮ್ಮ ಸಮಯಪ್ರಜ್ಞೆ ಮತ್ತು ಸಮಯೋಚಿತ ನಿರ್ಧಾರದಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಡಿಕೇರಿಯಿಂದ ವಿರಾಜಪೇಟೆಗೆ ತೆರಳುತ್ತಿದ್ದ ‘ರಾಣಿ’ ಹೆಸರಿನ ಖಾಸಗಿ ಬಸ್ನಲ್ಲಿ ಅಸ್ಸಾಂ ಮೂಲದ ಸುರ್ಜಾ ಬಾನು ಎಂಬ ಗರ್ಭಿಣಿ ಮಹಿಳೆ ಪ್ರಯಾಣಿಸುತ್ತಿದ್ದರು. ಬಸ್ ಮೂರ್ನಾಡು ಸಮೀಪ ತಲುಪುತ್ತಿದ್ದಂತೆ ಆಕೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡು ರಕ್ತಸ್ರಾವ ಆರಂಭವಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಸ್ ಸಿಬ್ಬಂದಿ ರಾಜೇಶ್ ಮತ್ತು ಕಿಶನ್ ತಕ್ಷಣವೇ ಸ್ಪಂದಿಸಿ, ಗರ್ಭಿಣಿಯನ್ನು ಬಸ್ನ ಸೀಟಿನಲ್ಲೇ ಸುರಕ್ಷಿತವಾಗಿ ಮಲಗಿಸಿದರು. ಮಾರ್ಗಮಧ್ಯೆ ಎಲ್ಲೂ ಬಸ್ ನಿಲ್ಲಿಸದೆ, ಪ್ರಯಾಣಿಕರ ಸಹಕಾರದೊಂದಿಗೆ ನೇರವಾಗಿ ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯ ಆವರಣಕ್ಕೇ ಬಸ್ಅನ್ನು ಕೊಂಡೊಯ್ದರು. ಬಸ್ ಆಸ್ಪತ್ರೆಗೆ ತಲುಪಿ ಸಿಬ್ಬಂದಿ ಮಹಿಳೆಯನ್ನು ತಕ್ಷಣವೇ ವೈದ್ಯರ ವಶಕ್ಕೆ ಒಪ್ಪಿಸಿದರು. ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸುರ್ಜಾ ಬಾನು ಅವರು ಸುಂದರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಮಯಪ್ರಜ್ಞೆ ಮೆರೆದು ತಾಯಿ-ಮಗುವಿನ ಜೀವ ರಕ್ಷಿಸಿದ ಬಸ್ ಚಾಲಕ ಹಾಗೂ ಕಂಡಕ್ಟರ್ಗೆ ಸಾರ್ವಜನಿಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ