ಭಾರತದ ವಿರುದ್ಧ ಅರ್ಧಶತಕ ಬಾರಿಸಿದ ಪಾಕ್ ಆಟಗಾರ್ತಿಗೆ ಶಿಕ್ಷೆ ವಿಧಿಸಿದ ಐಸಿಸಿ
India vs Pakistan Women's World Cup 2025: 2025ರ ಮಹಿಳಾ ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ 88 ರನ್ಗಳಿಂದ ಗೆದ್ದಿದೆ. ಪಾಕ್ ಆಟಗಾರ್ತಿ ಸಿದ್ರಾ ಅಮೀನ್ 81 ರನ್ ಗಳಿಸಿದ್ದರೂ, ಸೋಲಿನ ಹತಾಶೆಯಲ್ಲಿ ಬ್ಯಾಟ್ ನೆಲಕ್ಕೆ ಅಪ್ಪಳಿಸಿದ್ದಕ್ಕಾಗಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿ ಒಂದು ಡಿಮೆರಿಟ್ ಪಾಯಿಂಟ್ ಪಡೆದಿದ್ದಾರೆ. ಭಾರತದ ಬೌಲಿಂಗ್ ಮುಂದೆ ಪಾಕ್ ಮಂಡಿಯೂರಿದ್ದು, ಸಿದ್ರಾ ಅಮೀನ್ ಅಶಿಸ್ತಿಗೆ ಐಸಿಸಿ ಛೀಮಾರಿ ಹಾಕಿದೆ.
2025 ರ ಮಹಿಳಾ ವಿಶ್ವಕಪ್ನ 6ನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಭಾರತ ತಂಡ 88 ರನ್ಗಳಿಂದ ಗೆದ್ದುಕೊಂಡಿತು. ಭಾರತದ ಬೌಲಿಂಗ್ ಮುಂದೆ ಮಂಡಿಯೂರಿದ ಪಾಕ್ ಬ್ಯಾಟರ್ಗಳಿಗೆ ನೆಲಕಚ್ಚಿ ಆಡಲು ಸಾಧ್ಯವಾಗಲಿಲ್ಲ. ಆದಾಗ್ಯೂ ಭಾರತದ ಬೌಲಿಂಗ್ ದಾಳಿಗೆ ಪ್ರತಿರೋಧ ತೋರಿದ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸಿದ್ರಾ ಅಮೀನ್ 81 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ಸೋಲಿನ ಅಂತರವನ್ನು ತಗ್ಗಿಸಿದರು. ಆದರೆ ಔಟಾದ ಹತಾಶೆಯಲ್ಲಿ ತಾಳ್ಮೆ ಕಳೆದುಕೊಂಡ ತಂಡದ ಸಿದ್ರಾ ಅಮೀನ್ಗೆ ಇದೀಗ ಐಸಿಸಿ ಶಿಕ್ಷೆಯ ರೂಪದಲ್ಲಿ 1 ಡಿಮೆರಿಂಟ್ ಅಂಕವನ್ನು ನೀಡಿದೆ.
ಆರಂಭದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸಿದ್ರಾ ಅರ್ಧಶತಕ ಬಾರಿಸಿ ಶತಕದತ್ತ ಸಾಗುತ್ತಿದ್ದರು. ಆದರೆ ಇನ್ನಿಂಗ್ಸ್ನ 40 ನೇ ಓವರ್‌ನಲ್ಲಿ ಭಾರತೀಯ ಸ್ಪಿನ್ನರ್ ಸ್ನೇಹ್ ರಾಣಾ ಅವರನ್ನು ಔಟ್ ಮಾಡುವದರೊಂದಿಗೆ ಪಾಕ್ ತಂಡದ ಗೆಲುವಿನ ಕನಸಿಗೆ ಕೊಳ್ಳಿ ಇಟ್ಟರು. ಇತ್ತ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲರಾಗಿ ಶತಕವನ್ನೂ ತಪ್ಪಿಸಿಕೊಂಡ ಸಿದ್ರಾ ಅಮೀನ್ ಕೋಪದಿಂದ ತನ್ನ ಬ್ಯಾಟ್ ಅನ್ನು ನೆಲದ ಮೇಲೆ ಹೊಡೆದರು. ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದ್ದು, ಈ ಕಾರಣಕ್ಕಾಗಿ ಮ್ಯಾಚ್ ರೆಫರಿ, ಸಿದ್ರಾ ಅಮೀನ್ಗೆ ಶಿಕ್ಷೆ ವಿಧಿಸಿದ್ದಾರೆ.
ಐಸಿಸಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ, ಸಿದ್ರಾ ಅಮೀನ್ ಅವರು ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿದ್ದಾರೆ. ಈ ನಿಯಮವು ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು, ಬಟ್ಟೆ ಅಥವಾ ಮೈದಾನದಲ್ಲಿನ ಇತರ ಉಪಕರಣಗಳು ಮತ್ತು ಸಾಮಗ್ರಿಗಳೊಂದಿಗೆ ದುರ್ವರ್ತನೆಗೆ ಸಂಬಂಧಿಸಿದೆ. ಕೋಪದಲ್ಲಿ ಬ್ಯಾಟ್ ಅನ್ನು ನೆಲಕ್ಕೆ ಹೊಡೆದಿದ್ದು ಲೆವೆಲ್ 1 ಅಪರಾಧವಾಗಿದೆ. ಹೀಗಾಗಿ ಮ್ಯಾಚ್ ರೆಫರಿ, ಸಿದ್ರಾ ಅಮೀನ್ ಅವರ ಕ್ರಮವನ್ನು ಲೆವೆಲ್ 1 ಅಪರಾಧವೆಂದು ಘೋಷಿಸಿ ಅವರಿಗೆ ಛೀಮಾರಿ ಹಾಕಿದ್ದಾರೆ. ಲೆವೆಲ್ 1 ಅಪರಾಧದಿಂದಾಗಿ ಅವರ ಪಂದ್ಯ ಶುಲ್ಕವನ್ನು ಕಡಿತಗೊಳಿಸದಿದ್ದರೂ, ಸಿದ್ರಾ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ