ತಹಸೀಲ್ದಾರ್ ಭಾರಿ ಎಡವಟ್ಟು: ಸರ್ವೇ ಮಾಡದೇ 3 ಎಕರೆ ಬೆಳೆ ಧ್ವಂಸ; ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

Edited By:

Updated on: Oct 29, 2026 | 8:21 AM

ಯಾದಗಿರಿ ಜಿಲ್ಲೆಯಲ್ಲಿ ತಹಸೀಲ್ದಾರ್ ಬೇಜವಾಬ್ದಾರಿಯಿಂದ ರೈತರ ಬೆಳೆ ನಾಶವಾಗಿದೆ. ಹೈಕೋರ್ಟ್ ಆದೇಶ ಜಾರಿಗೊಳಿಸುವ ಭರದಲ್ಲಿ, ಸರ್ವೇ ನಂಬರ್ ಪರಿಶೀಲಿಸದೆ ಪಕ್ಕದ ಜಮೀನಿಗೆ ಟ್ರ್ಯಾಕ್ಟರ್ ನುಗ್ಗಿಸಿ ಬೆಳೆ ಧ್ವಂಸಗೊಳಿಸಲಾಗಿದೆ. ಬರಗಾಲದ ನಡುವೆಯೂ ಬೆಳೆದ ಜೋಳ, ಹತ್ತಿ ಬೆಳೆ ಕಳೆದುಕೊಂಡ ರೈತರು ನ್ಯಾಯ, ಪರಿಹಾರ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಯಾದಗಿರಿ, ಅ.29: ಭೀಕರ ಬರಗಾಲದ ನಡುವೆಯೂ ಅನ್ನದಾತರು ಕಷ್ಟಪಟ್ಟು ಬೆಳೆದಿದ್ದ ಬಂಗಾರದಂತಹ ಬೆಳೆ ಅಧಿಕಾರಿಯೊಬ್ಬರ ಬೇಜವಾಬ್ದಾರಿಯಿಂದ ಧ್ವಂಸಗೊಂಡಿದೆ. ಹೈಕೋರ್ಟ್ ಆದೇಶ ಜಾರಿಗೊಳಿಸುವ ಭರದಲ್ಲಿ ಜಮೀನಿನ ಸರ್ವೇ ನಂಬರ್ ಹಾಗೂ ಹಿಸ್ಸಾವನ್ನೇ ಸರಿಯಾಗಿ ಪರಿಶೀಲಿಸದ ವಡಗೇರಾ ತಹಸೀಲ್ದಾರ್ ಮಂಗಳಾ, ಪಕ್ಕದ ರೈತರ ಜಮೀನಿಗೆ ಟ್ರ್ಯಾಕ್ಟರ್ ನುಗ್ಗಿಸಿ ಬೆಳೆ ನಾಶಪಡಿಸಿರುವ ಭಾರಿ ಎಡವಟ್ಟು ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಿಂದ ರೊಚ್ಚಿಗೆದ್ದ ತೇಕರಾಳ ಗ್ರಾಮಸ್ಥರು ಸ್ಥಳದಲ್ಲೇ ತಹಸೀಲ್ದಾರ್ ಹಾಗೂ ಸಿಬ್ಬಂದಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತೇಕರಾಳ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಹೊನ್ನಮ್ಮ ಬಾವೂರ್ ಎಂಬುವವರಿಗೆ ಜಮೀನು ಕಬ್ಜಾ ಕೊಡಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಹೈಕೋರ್ಟ್ ಆದೇಶ ಜಾರಿಗೊಳಿಸಲು ತಹಸೀಲ್ದಾರ್ ಮಂಗಳಾ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ತೇಕರಾಳ ಗ್ರಾಮಕ್ಕೆ ಆಗಮಿಸಿದ್ದರು. ಕಬ್ಜಾ ಕೊಡಿಸುವ ವೇಳೆ ಜಮೀನಿನ ಸರ್ವೇ ನಂಬರ್ ಹಾಗೂ ಹಿಸ್ಸಾಗಳನ್ನು ಸರಿಯಾಗಿ ಪರಿಶೀಲಿಸದೇ, ಮುಂಜಾಗ್ರತಾ ಸರ್ವೇ ನಡೆಸದೇ ತಹಸೀಲ್ದಾರ್ ನೇರವಾಗಿ ಪಕ್ಕದ ಹೊಲಕ್ಕೆ ಟ್ರ್ಯಾಕ್ಟರ್ ನುಗ್ಗಿಸಿ ಬೆಳೆ ಧ್ವಂಸಗೊಳಿಸಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳ ಈ ಬೇಜವಾಬ್ದಾರಿ ನಡವಳಿಕೆಯಿಂದ ಸರ್ವೇ ನಂಬರ್ 253 ರ ಹಿಸ್ಸಾಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ನಾಶವಾಗಿವೆ. : ತಮ್ಮ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಜೋಳದ ಬೆಳೆ ಸಂಪೂರ್ಣ ಧ್ವಂಸಗೊಂಡಿದೆ. ತಮ್ಮ 1 ಎಕರೆ ಜಮೀನಿನಲ್ಲಿದ್ದ ಹತ್ತಿ ಬೆಳೆ ಮಣ್ಣುಪಾಲಾಗಿದೆ. ಒಟ್ಟು 3 ಎಕರೆ ಪ್ರದೇಶದಲ್ಲಿದ್ದ ಬಡ ರೈತರ ಬೆಳೆ ನಾಶವಾಗಿದ್ದು, ಕಣ್ಣೀರು ಹಾಕುತ್ತಿರುವ ರೈತರು ತಮಗೆ ನ್ಯಾಯ ಒದಗಿಸಬೇಕು ಮತ್ತು ನಷ್ಟ ಪರಿಹಾರ ನೀಡಿ ತಪ್ಪಿತಸ್ಥ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಮೀನ್​ ಸಾಬ್​

ಅಮೀನ್​ ಸಾಬ್​ ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದಾರೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿಸಿದ್ದಾರೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಹವ್ಯಾಸ ಕ್ರಿಕೆಟ್ ಆಡುವುದು, ಮಾನವೀಯ ಮೌಲ್ಯಗಳುಳ್ಳ ಸುದ್ದಿಗಳನ್ನ ವರದಿ ಮಾಡುವುದು.

Read More