ಕಾಬೂಲ್ ಗುರುದ್ವಾರ ದಾಳಿಯ ಹೊಣೆ ಹೊತ್ತ ಐಸಿಸ್ ಉಗ್ರರು: ಮೃತರ ಸಂಖ್ಯೆಯನ್ನು ಮನಸೋಯಿಚ್ಛೆ ಹೆಚ್ಚಿಸಿ ಹೇಳಿದ ಭಯೋತ್ಪಾದಕರು

ಕಾಬೂಲ್ ಗುರುದ್ವಾರದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಕಾಬೂಲ್ ಗುರುದ್ವಾರ ದಾಳಿಯ ಹೊಣೆ ಹೊತ್ತ ಐಸಿಸ್ ಉಗ್ರರು: ಮೃತರ ಸಂಖ್ಯೆಯನ್ನು ಮನಸೋಯಿಚ್ಛೆ ಹೆಚ್ಚಿಸಿ ಹೇಳಿದ ಭಯೋತ್ಪಾದಕರು
ಕಾಬೂಲ್​ನಲ್ಲಿರುವ ಗುರುದ್ವಾರ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 19, 2022 | 11:57 AM

ಕಾಬೂಲ್: ಅಫ್ಘಾನಿಸ್ತಾನದ ಗುರುದ್ವಾರದ (Afghanistan Gurudwara) ಮೇಲೆ ನಡೆದ ಬಾಂಬ್ ದಾಳಿಯ ಹೊಣೆಯನ್ನು ಐಸಿಸ್ ಉಗ್ರಗಾಮಿ (ISIS Terrorists) ಸಂಘಟನೆ ಹೊತ್ತುಕೊಂಡಿದೆ. ಮೃತರು ಮತ್ತು ಗಾಯಾಳುಗಳ ಸಂಖ್ಯೆಯನ್ನು ಮನಸ್ಸಿಗೆ ಬಂದಂತೆ ಹೆಚ್ಚಿಸಿರುವ ಐಸಿಸ್ ಉಗ್ರರು, ಪ್ರವಾದಿಗೆ ಅವಮಾನವಾಗುವಂತೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ನೀಡಿರುವ ಹೇಳಿಕೆ ವಿರೋಧಿಸಿ ಈ ದಾಳಿ ನಡೆಸಲಾಯಿತು ಎಂದು ಹೇಳಿದ್ದಾರೆ. ಐಸಿಸ್ ವಿಚಾರಗಳ ಪ್ರಚಾರಕ್ಕೆ ಬಳಸುವ ವೆಬ್​ಸೈಟ್​ನಲ್ಲಿ ಹೇಳಿಕೆ ಪ್ರಕಟಿಸಿರುವ ಉಗ್ರಗಾಮಿಗಳು, ‘ಪ್ರವಾದಿಯನ್ನು ಅವಹೇಳನ ಮಾಡಿದ್ದ ಧರ್ಮಭ್ರಷ್ಟರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಾಂಬ್ ಸ್ಫೋಟಿಸಲಾಗಿದೆ. ಹಿಂದೂಗಳು ಮತ್ತು ಸಿಖ್ಖರು ನಮ್ಮ ಗುರಿಯಾಗಿದ್ದರು’ ಎಂದು ಹೇಳಿಕೊಂಡಿದ್ದಾರೆ. ‘ಕಾಬೂಲ್​ನಲ್ಲಿರುವ ಹಿಂದೂ-ಮುಸ್ಲಿಮರ ದೇಗುಲದ ಕಾವಲುಗಾರರನನ್ನು ಹತ್ಯೆ ಮಾಡಿ ನಮ್ಮ ಹೋರಾಟಗಾರರು ಒಳಪ್ರವೇಶಿಸಿದರು. ನಂತರ ಮಿಷಿನ್​ಗನ್​ ಮೂಲಕ ಗುಂಡು ಹಾರಿಸಿ, ಗ್ರೆನೇಡ್​ಗಳನ್ನು ಸ್ಫೋಟಿಸಿ 50 ಮಂದಿ ಬಹುದೇವತಾರಾಧಕರನ್ನು ಕೊಲ್ಲಲಾಗಿದೆ’ ಎಂದು ಐಸಿಸ್ ಉಗ್ರರು ಹೇಳಿಕೊಂಡಿದ್ದಾರೆ.

ಕಾಬೂಲ್ ಗುರುದ್ವಾರದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಅಫ್ಘಾನಿಸ್ತಾನದ ಆಂತರಿಕ ಭದ್ರತಾ ಇಲಾಖೆಯ ವಕ್ತಾರ ಅಬ್ದುಲ್ ನಾಜಿ ತಕೊರ್, ಉಗ್ರಗಾಮಿಗಳು ಗುರುದ್ವಾರ ಪ್ರವೇಶಿಸಿ ಒಂದು ಗ್ರೆನೇಡ್ ಸ್ಫೋಟಿಸಿದ್ದಾರೆ ಎಂದು ಹೇಳಿದ್ದರು.

ಕಾಬೂಲ್​ಗೆ ಭಾರತದ ನಿಯೋಗವೊಂದರ ಭೇಟಿಯ ಬೆನ್ನಲ್ಲೇ ಬಾಂಬ್ ದಾಳಿ ನಡೆದಿದೆ. ಭಾರತವು ಅಫ್ಘಾನಿಸ್ತಾನಕ್ಕೆ ಒದಗಿಸುತ್ತಿರುವ ಮಾನವೀಯ ನೆರವನ್ನು ಪರಿಣಾಮಕಾರಿಯಾಗಿ ವಿತರಿಸುವ ಸಾಧ್ಯತೆಯ ಬಗ್ಗೆ ಭಾರತದ ನಿಯೋಗವು ಅಫ್ಘಾನಿಸ್ತಾನದ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದರು. ಅಫ್ಘಾನಿಸ್ತಾನವು ತಾಲಿಬಾನ್ ತೆಕ್ಕೆಗೆ ಬಂದ ನಂತರ ಭಾರತವು ಕಾಬೂಲ್​ನಲ್ಲಿದ್ದ ದೂತಾವಾಸ ಕಚೇರಿಯನ್ನು ಮುಚ್ಚಿತ್ತು. ಮತ್ತೊಮ್ಮೆ ಅಫ್ಘಾನಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದುವ ಸಾಧ್ಯತೆ ಬಗ್ಗೆ ಭಾರತ ಇದೀಗ ಮಾತುಕತೆ ಆರಂಭಿಸಿದೆ.

ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ಹೆಚ್ಚಾಗಿದೆ. ಒಟ್ಟಾರೆ ಬಾಂಬ್ ಸ್ಫೋಟ ಪ್ರಕರಣಗಳು ಕಡಿಮೆಯಾಗಿದ್ದರೂ ಐಸಿಸ್ ಚಟುವಟಿಕೆ ಹೆಚ್ಚಾಗಿದೆ. ತಾಲಿಬಾನ್​ನಂತೆ ಐಸಿಸ್ ಸಹ ಸುನ್ನಿ ಮೂಲಭೂತವಾದಿ ಸಂಘಟನೆಯೇ ಆಗಿದೆ. ಆದರೆ ಸೈದ್ಧಾಂತಿಕ ಬಿಕ್ಕಟ್ಟುಗಳ ಕಾರಣದಿಂದ ಎರಡೂ ಸಂಘಟನೆಗಳ ನಡುವೆ ವೈರತ್ವ ಮನೆಮಾಡಿದೆ.

1970ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ಸುಮಾರು 5 ಲಕ್ಷ ಸಿಖ್ಖರು ವಾಸವಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇದು ಕೇವಲ 200ಕ್ಕೆ ಕುಸಿದಿದೆ. ಅಲ್ಲಿರುವ ಅಳಿದುಳಿದ ಸಿಖ್ಖರು ಸಹ ಮೊನ್ನೆ ಬಾಂಬ್ ಸ್ಫೋಟವಾದ ಗುರುದ್ವಾರದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಸಿಖ್ಖರ ಮೇಲೆ ದಾಳಿಗಳು ನಿರಂತರ ನಡೆಯುತ್ತಿವೆ. ಮಾರ್ಚ್ 2020ರಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದರು. ಆ ದಾಳಿಯ ಹೊಣೆಯನ್ನೂ ಐಸಿಸ್ ಹೊತ್ತುಕೊಂಡಿತ್ತು.

ಕಾಬೂಲ್ ಗುರುದ್ವಾರದ ಮೇಲಿನ ಉಗ್ರಗಾಮಿ ದಾಳಿಯನ್ನು ಭಾರತ ಸರ್ಕಾರ ಖಂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಸಹ ದಾಳಿಯನ್ನು ಖಂಡಿಸಿ ಟ್ವೀಟ್ ಮಾಡಿದ್ದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:54 am, Sun, 19 June 22