ದೆಹಲಿ: ವಿಶ್ವದಲ್ಲಿ ಇರುವ ಎಲ್ಲಾ ಮುಸ್ಲಿಮರಿಗಾಗಿಯೂ ಧ್ವನಿ ಎತ್ತಲು ತಮಗೆ ಹಕ್ಕಿದೆ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ. ನಾವು ಕಾಶ್ಮೀರದಲ್ಲಿ ಇರುವ, ಭಾರತದಲ್ಲಿ ಇರುವ ಅಥವಾ ಯಾವುದೇ ದೇಶದಲ್ಲಿ ಇರುವ ಮುಸ್ಲಿಮರ ಪರವಾಗಿ ಧ್ವನಿ ಎತ್ತಬಹುದು ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ. ಈ ಬಗ್ಗೆ ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ನಾವು ಮುಸ್ಲಿಮರ ಪರವಾಗಿ ಧ್ವನಿ ಎತ್ತುತ್ತೇವೆ. ಹಾಗೂ ಮುಸ್ಲಿಮರು ಕೂಡ ನಿಮ್ಮ ಸ್ವಂತ ಜನರು, ನಿಮ್ಮ ನಾಗರಿಕರು. ಅವರಿಗೂ ನಿಮ್ಮ ಕಾನೂನಿನ ಅಡಿಯಲ್ಲಿ ಸಮಾನ ಹಕ್ಕು ನೀಡಬೇಕು ಎಂದು ತಿಳಿಸಿದ್ದಾರೆ. ಈ ವಿಚಾರವನ್ನು ಬಿಬಿಸಿ ಉರ್ದು ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಭಾರತ ವಿರೋಧಿ ಚಟುವಟಿಕೆ ಅಥವಾ ಭಯೋತ್ಪಾದಕ ಕೆಲಸಗಳಿಗೆ ಬಳಸಬಹುದು ಎಂಬ ಬಗ್ಗೆ ಈ ಮೊದಲೇ ಅನುಮಾನಗಳು ದಟ್ಟವಾಗಿದ್ದವು. ಹಾಗೂ ಆ ಬಗ್ಗೆ ಆತಂಕವೂ ಇತ್ತು. ಇದೀಗ ತಾಲಿಬಾನಿಗಳು ನೀಡಿರುವ ಈ ಹೇಳಿಕೆ ಅವರ ನಿಲುವುಗಳ ಬಗ್ಗೆ ಅನುಮಾನ ಹೆಚ್ಚಿಸಿದೆ.
ಹಾಗೆಂದು ತಾಲಿಬಾನ್ ಸಂಘಟನೆಗೆ ಯಾವುದೇ ದೇಶದ ವಿರುದ್ಧ ಶ್ತಸ್ತ್ರಾಸ್ತ ಪ್ರಯೋಗಿಸುವ ಇರಾದೆ ಇಲ್ಲ ಎಂದೂ ಶಹೀನ್ ಹೇಳಿದ್ದಾರೆ. ತಾಲಿಬಾನಿಗಳು ಈ ಮೊದಲು ಕಾಶ್ಮೀರದ ವಿಚಾರ ಪ್ರಸ್ತಾಪಿಸಿ ಮಾತನಾಡಿದ್ದಾಗ, ಅದು ದೇಶದ ಆಂತರಿಕ ವಿಷಯ ಎಂದು ಹೇಳಿದ್ದರು. ಇದೀಗ ಮಾತು ತಿರುಗಿಸಿರುವುದು ತಾಲಿಬಾನಿಗಳ ನಿಲುವನ್ನು ಅನುಮಾನಿಸುವಂತೆ ಮಾಡಿದೆ. ಕಾಶ್ಮೀರದ ವಿವಾದ ಭಾರತ ಹಾಗೂ ಪಾಕಿಸ್ತಾನದ ನಡುವೆ 1947ರಿಂದಲೂ ಇದೆ. ಈ ವಿವಾದಕ್ಕೆ ತುಪ್ಪ ಸುರಿಯಲು ಈಗ ತಾಲಿಬಾನ್ ಕೂಡ ಸೇರಿಕೊಳ್ಳುವ ಸುಳಿವು ಸಿಕ್ಕಿದೆ.
ತಾಲಿಬಾನಿಗಳ ಮೇಲೆ ಹೆಚ್ಚಿದ ಅನುಮಾನ
ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲಿರುವ ಲಷ್ಕರ್ ಇ ತೋಯ್ಬಾ, ಜೈಷ್ ಇ ಮೊಹಮ್ಮದ್ ಸಂಘಟನೆಯ ಜೊತೆಗೆ ತಾಲಿಬಾನ್ ಕೈ ಜೋಡಿಸಬಹುದು ಎಂಬ ಅನುಮಾನ ಕೂಡ ಶುರುವಾಗಿದೆ. ಈಗಾಗಲೇ ಜೈಷ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜರ್, ಕಂದಹಾರ್ ಗೆ ಹೋಗಿ ತಾಲಿಬಾನ್ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾನೆ. ಕಾಶ್ಮೀರದಲ್ಲಿ ಭಾರತದ ವಿರುದ್ಧ ಹೋರಾಟ ನಡೆಸಲು ತಾಲಿಬಾನ್ ಸಂಘಟನೆಯ ನೆರವುನ್ನು ಮಸೂದ್ ಅಜರ್ ಕೋರಿದ್ದಾನೆ. ಹೀಗಾಗಿ ಭಾರತದ ವಿರೋಧಿ ಭಯೋತ್ಪಾದನಾ ಸಂಘಟನೆಗಳೆಲ್ಲಾ ಒಂದಾಗಬಹುದು ಎಂದು ಮೊದಲಿನಿಂದ ಇದ್ದ ಆತಂಕ ಈಗ ನಿಜವಾಗುತ್ತಿದೆ.
ನೇರ ಯುದ್ಧಗಳಲ್ಲಿ ಹೋರಾಡಿ ಗೆಲ್ಲಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ
ಭಯೋತ್ಪಾದನಾ ಸಂಘಟನೆಗಳ ಬೆನ್ನ ಹಿಂದೆ ಇರುವ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ನೇರಾನೇರ ಯುದ್ದಗಳಲ್ಲಿ ಹೋರಾಡಿ ಗೆಲ್ಲಲು ಸಾಧ್ಯವಾಗಿಲ್ಲ. 1965, 1971 ಹಾಗೂ 1999ರ ಕಾರ್ಗೀಲ್ ಯುದ್ದದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸೋತು ಸುಣ್ಣವಾಗಿದೆ. ಹೀಗಾಗಿ ಭಯೋತ್ಪಾದನಾ ಸಂಘಟನೆಗಳ ಮೂಲಕ ಭಾರತದ ವಿರುದ್ಧ ಪ್ರಾಕ್ಸಿ ವಾರ್ ನಡೆಸುತ್ತಿದೆ. ಆದರೆ, ಭಾರತದ ಸೇನೆಗೆ ಈ ಹಿಂದೆ 90 ರ ದಶಕದಲ್ಲಿ ಅಫ್ಘನ್ ಉಗ್ರರು, ಪಾಕ್ ಉಗ್ರರನ್ನು ಜಂಟಿಯಾಗಿ ಎದುರಿಸಿದ ಅನುಭವ ಇದೆ. ಹೀಗಾಗಿ ಈಗ ಪಾಕ್ ಉಗ್ರರು, ತಾಲಿಬಾನ್ ಉಗ್ರರು ಜಂಟಿ ದಾಳಿ ನಡೆಸಿದರೂ, ಮೆಟ್ಟಿ ನಿಲ್ಲುವ ಶಕ್ತಿ ಭಾರತೀಯ ಸೇನೆಗೆ ಇದೆ.
ಕಾಶ್ಮೀರದ ಜನರಿಗೂ ತಾಲಿಬಾನ್ ಉಗ್ರಗಾಮಿಗಳ ಬಗ್ಗೆ ಭಯ ಇದೆ. ಹೀಗಾಗಿ ಕಾಶ್ಮೀರದ ಜನರು ಕೂಡ ಅಪ್ಘನ್ ಉಗ್ರರಿಗೆ ಬೆಂಬಲ ನೀಡಲ್ಲ ಎಂಬ ಭರವಸೆ ಇದೆ. ಅಫ್ಘನ್ ನೆಲವನ್ನು ನೆರೆಹೊರೆಯ ದೇಶಗಳ ವಿರುದ್ಧ ಬಳಸಿಕೊಳ್ಳಲು ಅವಕಾಶ ಕೊಡಲ್ಲ ಎಂದು ತಾಲಿಬಾನ್ ಹೇಳಿತ್ತು. ಇನ್ನೂ ಮುಂದೆ ತಾಲಿಬಾನ್ ನಡೆ ಹೇಗಿರುತ್ತೆ ಎಂಬ ಬಗ್ಗೆ ಕಾದು ನೋಡುವ ತಂತ್ರಕ್ಕೆ ಭಾರತ ಮೊರೆ ಹೋಗಿದೆ.
ತಮ್ಮದೇ ದೇಶದಲ್ಲಿ ಮಾಡಲು ಬೇಕಾದಷ್ಟು ಕೆಲಸ ಇರುವಾಗ ಕಾಶ್ಮೀರದ ಬಗ್ಗೆ ಮೂಗು ತೂರಿಸಲು ಸಾಧ್ಯವೇ?
ತಾಲಿಬಾನ್ ಗೆ ಈಗ ತನ್ನದೇ ಅಫ್ಘಾನಿಸ್ತಾನದಲ್ಲಿ ಮಾಡಲು ಬೇಕಾದಷ್ಟು ಕೆಲಸಗಳಿವೆ. ಮೊದಲೇ ಅಫ್ಘಾನಿಸ್ತಾನದ ಜನರು ಬಡತನ, ಹಸಿವು, ಹಣ ಇಲ್ಲದೇ ಪರದಾಡುತ್ತಿದ್ದಾರೆ. ಅಂತರಿಕವಾಗಿ ಪಂಜಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ಆಳ್ವಿಕೆಗೆ ತೀವ್ರ ವಿರೋಧ ಮುಂದುವರಿದಿದೆ. ಮಹಿಳೆಯರು ತಾಲಿಬಾನ್ ಆಳ್ವಿಕೆಯ ವಿರುದ್ದ ತಿರುಗಿ ಬಿದ್ದಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯ ತಾಲಿಬಾನ್ ಆಳ್ವಿಕೆಯ ಪ್ರತಿ ಹೆಜ್ಜೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ದೇಶದ ಬೊಕ್ಕಸದಲ್ಲಿ ಹಣವೇ ಇಲ್ಲ. ಆದಾಯವೂ ಇಲ್ಲ. ಅಫ್ಘನಿಸ್ತಾನ ದೇಶ ಮುನ್ನೆಡೆಸಲು ಕೂಡ ತಾಲಿಬಾನಿಗಳಿಗೆ ಹಣ ಬೇಕು. ಈ ಎಲ್ಲ ಸಮಸ್ಯೆ ಬಗೆಹರಿಸದೇ, ಭಾರತದ ಕಾಶ್ಮೀರದ ವಿಷಯಕ್ಕೆ ತಾಲಿಬಾನ್ ಮೂಗು ತೂರಿಸಿದರೇ, ಭಾರತ ಕೂಡ ತಾಲಿಬಾನ್ಗೆ ಬಿಸಿ ಮುಟ್ಟಿಸೋದು ಖಚಿತ.
ಅಫ್ಘಾನಿಸ್ತಾನಕ್ಕೆ ಭಾರತ ನೀಡುತ್ತಿರುವ ಹಣಕಾಸಿನ ನೆರವುನ್ನು ಸ್ಥಗಿತಗೊಳಿಸಲಿದೆ. ಅಫ್ಘನ್ ನಲ್ಲಿ ಮಾಡುತ್ತಿರುವ ಅಭಿವೃದ್ದಿ ಕೆಲಸಗಳನ್ನು ಸ್ಥಗಿತಗೊಳಿಸಲಿದೆ. ಅಂತಾರಾಷ್ಟ್ರೀಯ ಸಮುದಾಯ ತಾಲಿಬಾನ್ ಆಳ್ವಿಕೆಯ ಅಫ್ಘನಿಸ್ತಾನದ ವಿರುದ್ಧ ಆರ್ಥಿಕ ದಿಗ್ಭಂಧನ ವಿಧಿಸಲಿದೆ. ಇದರಿಂದ ತಾಲಿಬಾನ್ ಗೆ ಮತ್ತಷ್ಟು ಸಂಕಷ್ಟ ಎದುರಾಗೋದು ಖಚಿತ. ಭಾರತವು ತಜಕಿಸ್ತಾನದಲ್ಲಿ ತನ್ನದೇ ಆದ ಆಯ್ನಿ ವಾಯುನೆಲೆಯನ್ನು ಹೊಂದಿದೆ. ಈ ವಾಯುನೆಲೆ ಮೂಲಕ ತಾಲಿಬಾನಿಗಳ ಮೇಲೆ ಸಲೀಸಾಗಿ ದಾಳಿ ನಡೆಸಬಹುದು.
ವಿಶೇಷ ವರದಿ: ಎಸ್. ಚಂದ್ರಮೋಹನ್, ಟಿವಿ9 ನ್ಯಾಷನಲ್ ಬ್ಯೂರೋ ಮುಖ್ಯಸ್ಥರು
ಇದನ್ನೂ ಓದಿ: Tv9 Exclusive: ಭಾರತ, ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ: ತಾಲಿಬಾನ್ ವಕ್ತಾರ ಸುಹೇಲ್ ಶಾಹಿನ್ ಸಂದರ್ಶನ
ಇದನ್ನೂ ಓದಿ: Afghanistan Government: ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ ತಾಲಿಬಾನ್ ಸಹ- ಸಂಸ್ಥಾಪಕ ಮುಲ್ಲಾ ಬರಾದಾರ್