Tv9 Exclusive: ಭಾರತ, ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ: ತಾಲಿಬಾನ್ ವಕ್ತಾರ ಸುಹೇಲ್ ಶಾಹಿನ್ ಸಂದರ್ಶನ

Taliban Spokesperson Interview: ಭಾರತವು ಅಫ್ಘಾನಿಸ್ತಾನದ ಜನರ ಬಗ್ಗೆ ಎಂಥ ನಿಲುವನ್ನು ಮುಂದಿನ ದಿನಗಳಲ್ಲಿ ಹೊಂದಿರುತ್ತದೆ ಎನ್ನುವುದನ್ನು ಆಧರಿಸಿ ಭಾರತದ ಬಗೆಗಿನ ತಾಲಿಬಾನಿಗಳ ಧೋರಣೆ ಅಂತಿಮಗೊಳ್ಳಲಿದೆ.

Tv9 Exclusive: ಭಾರತ, ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ: ತಾಲಿಬಾನ್ ವಕ್ತಾರ ಸುಹೇಲ್ ಶಾಹಿನ್ ಸಂದರ್ಶನ
ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್
Follow us
|

Updated on:Aug 29, 2021 | 6:23 PM

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರವನ್ನು ತಾಲಿಬಾನಿಗಳು ತಮ್ಮ ಸುಪರ್ದಿಗೆ ತೆಗೆದುಕೊಂಡು 15 ದಿನಗಳಾಗುತ್ತಿವೆ. ಆಗಸ್ಟ್ 15ರಂದು ಕಾಬೂಲ್ ಪತನದೊಂದಿಗೆ ತಾಲಿಬಾನ್ ಆಡಳಿತಕ್ಕೆ ವೇದಿಕೆ ಸಿದ್ಧವಾಯಿತು. ನಿಗದಿಯಂತೆ ಆಗಸ್ಟ್ 31 ಅಮೆರಿಕ ಮತ್ತು ನ್ಯಾಟೊ ಪಡೆಗಳು ಅಫ್ಘಾನಿಸ್ತಾನದಿಂದ ಹಿಂದಿರುಗಲು ವಿಧಿಸಿರುವ ಗಡುವು. ತಾಲಿಬಾನಿಗಳ ಕಾಬೂಲ್​ ಗೆಲುವಿನ ಬೆನ್ನಲ್ಲೇ ಅಲ್ಲಿನ ಜನರು ವಿಮಾನ ನಿಲ್ದಾಣದತ್ತ ಧಾವಿಸಿ, ದೇಶಬಿಟ್ಟು ಹೋಗಲು ಹಾತೊರೆದರು. ಮಾನವೀಯ ಬಿಕ್ಕಟ್ಟು ನಿರ್ಮಾಣವಾಯಿತು.

ಅಫ್ಘಾನಿಸ್ತಾನದಲ್ಲಿ ಮುಂದಿನ ದಿನಗಳಲ್ಲಿ ತಾಲಿಬಾನ್ ಆಡಳಿತ ಹೇಗಿರುತ್ತದೆ? ಭಾರತದ ಬಗ್ಗೆ, ಕಾಶ್ಮೀರದ ಬಗ್ಗೆ ತಾಲಿಬಾನ್ ನಿಲುವು ಏನು ಎಂಬುದು ಇದೀಗ ನಮ್ಮ ದೇಶದ ಜನರನ್ನು ಚಿಂತನೆಗೆ ಹಚ್ಚಿರುವ ಪ್ರಶ್ನೆಗಳು. Tv9 ಭಾರತ್​ವರ್ಷ್​​ ಸುದ್ದಿವಾಹಿನಿಯ ದಿನೇಶ್ ಗೌತಮ್ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಇಂಥ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಪ್ರ: ಪಾಕಿಸ್ತಾನವು ನಿಮ್ಮನ್ನು ಭಾರತದ ವಿರುದ್ಧ ಬಳಸಿಕೊಳ್ಳುವುದಿಲ್ಲವೇ? ಈ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಲು ಭಾರತೀಯರು ಬಯಸುತ್ತಾರೆ… ಉ: ಭಾರತವು ಅಫ್ಘಾನಿಸ್ತಾನದ ಜನರ ಬಗ್ಗೆ ಎಂಥ ನಿಲುವನ್ನು ಮುಂದಿನ ದಿನಗಳಲ್ಲಿ ಹೊಂದಿರುತ್ತದೆ ಎನ್ನುವುದನ್ನು ಆಧರಿಸಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಭಾರತದ ಬಗ್ಗೆ ನಮಗೆ ಒಳ್ಳೆಯ ಅಭಿಪ್ರಾಯವಿದೆ. ಅದು ಮುಂದುವರಿಯಬೇಕೆಂದೇ ನಾವು ಬಯಸುತ್ತೇವೆ. ಅಫ್ಘಾನಿಸ್ತಾನದಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಭಾರತ ಪೂರ್ಣಗೊಳಿಸಬೇಕು ಎಂದು ಹಾರೈಸುತ್ತೇವೆ. ಅಫ್ಘಾನಿಸ್ತಾನದ ನೆಲವನ್ನು ಯಾವುದೇ ದೇಶದ ವಿರುದ್ಧ ಬಳಸಲು ಬಿಡಬಾರದು ಎನ್ನುವುದೇ ನಮ್ಮ ನಿಲುವು.

ಪ್ರ: ಅಫ್ಘಾನಿಸ್ತಾನದಲ್ಲಿ ಸಾಕಷ್ಟು ಭಾರತೀಯರು ಇದ್ದಾರೆ. ಅವರಿಗೆ ಸುರಕ್ಷೆಯ ಖಾತ್ರಿ ಹೇಗೆ ಕೊಡುವಿರಿ? ಉ: ಪಾಸ್​ಪೋರ್ಟ್, ವಿಸಾ ಮತ್ತು ಇತರ ಅತ್ಯಗತ್ಯ ದಾಖಲಾತಿಗಳು ಇರುವವರಿಗೆ ಏನೂ ಸಮಸ್ಯೆಯಾಗುವುದಿಲ್ಲ. ಆದರೆ ವಿಮಾನ ನಿಲ್ದಾಣದಲ್ಲಿ 40-50 ಸಾವಿರ ಜನರು ಸೇರಿಕೊಂಡರೆ ಅವರ ದಾಖಲೆಗಳನ್ನು ಪರಿಶೀಲಿಸುವುದಾದರೂ ಹೇಗೆ? ಸರಿಯಾದ ದಾಖಲೆಗಳಿದ್ದವರು ಸ್ವಲ್ಪ ನಿಧಾನಿಸಲಿ. ನಂತರದ ದಿನಗಳಲ್ಲಿ ವಾಣಿಜ್ಯ ವಿಮಾನಗಳ ಮೂಲಕ ಅವರು ಯಾವಾಗ ಬೇಕಾದರೂ ಅವರ ದೇಶಗಳಿಗೆ ಹೋಗಬಹುದು. ಈಗ ವಿಮಾನ ನಿಲ್ದಾಣಕ್ಕೆ ಬಂದು ಕಾನೂನು ಸುವ್ಯವಸ್ಥೆಯ ಸಮಸ್ಯೆ ಮಾಡಬಾರದು.

ಪ್ರ: ಪಾಕಿಸ್ತಾನವು ನಿಮಗೆ ಮಾಡಿದ ಉಪಕಾರಕ್ಕೆ ಪ್ರತಿಯಾಗಿ ನೀವು ಕಾಶ್ಮೀರವನ್ನು ಅವರಿಗೆ ಒಪ್ಪಿಸುತ್ತೀರಿ ಎಂಬ ಮಾತುಗಳು ಕೇಳಿಬರುತ್ತಿವೆ. ನಿಮ್ಮ ಪ್ರತಿಕ್ರಿಯೆ ಏನು? ಉ: ನಮ್ಮ ನೆಲೆವನ್ನು ಮತ್ತೊಂದು ದೇಶದ ವಿರುದ್ಧ ಬಳಸಲು ಎಂದಿಗೂ ಬಿಡುವುದಿಲ್ಲ ಎಂಬುದು ಅಫ್ಘಾನಿಸ್ತಾನದಲ್ಲಿ ನಾವು ಘೋಷಿಸಿರುವ ನಿಯಮ. ಆಡಳಿತವು ನಮ್ಮ ಸುಪರ್ದಿಗೆ ಬಂದ ನಂತರ ಜನರ ಬದುಕು ಸುಧಾರಿಸಲು ಪ್ರಯತ್ನಿಸುತ್ತೇವೆ. ಅದು ನಮ್ಮ ಆದ್ಯತೆ.

ಪ್ರ: ಮಸೂದ್ ಅಜರ್ ಭಾರತದಲ್ಲಿ ನಡೆದ ಹಲವು ಭಯೋತ್ಪಾದಕ ಕೃತ್ಯಗಳ ಪ್ರಮುಖ ಆರೋಪಿ. ಮೋಸ್ಟ್​ ವಾಟೆಂಡ್ ಭಯೋತ್ಪಾದಕ. ಅವನು ತಾಲಿಬಾನ್ ನಾಯಕ ಮುಲ್ಲಾ ಬಾರದಾರ್​ನನ್ನು ಭೇಟಿಯಾಗಿರುವ ಬಗ್ಗೆ ವರದಿಗಳು ಬಂದಿವೆ. ಈ ಬಗ್ಗೆ ಏನು ಹೇಳ್ತೀರಿ? ಉ: ನೀವು ಏನು ಕೇಳುತ್ತಿದ್ದೀರಿ ಎಂಬುದೇ ಸರಿಯಾಗಿ ಅರ್ಥವಾಗುತ್ತಿಲ್ಲ. ಅಂಥ ಯಾವುದೇ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ನಮ್ಮ ವಿರುದ್ಧ ಅಪಪ್ರಾಚಾರ ನಡೆಯುತ್ತಿದೆ. ಜನರಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದ ಕೆಲವರು ಇಂಥ ಕೃತ್ಯಗಳಿಗೆ ಕೈಹಾಕಿದ್ದಾರೆ.

ಪ್ರ: ಕಾಶ್ಮೀರದ ಬಗ್ಗೆ ನಿಮ್ಮ ನಿಲುವು ಏನು? ಸ್ಪಷ್ಟಪಡಿಸುವಿರಾ? ಉ: ಅಫ್ಘಾನಿಸ್ತಾನದ ನೆಲವನ್ನು ಬೇರೆಯವರ ವಿರುದ್ಧ ಬಳಕೆಗೆ ಬಿಡುವುದಿಲ್ಲ ಎಂಬ ಮಾತನ್ನು ಪುನರುಚ್ಚರಿಸುತ್ತೇನೆ. ಜಗತ್ತಿನಲ್ಲಿ ಎಲ್ಲಿಯೇ ಮುಸ್ಲಿಮರಿರಲಿ, ಅವರಿಗೆ ಸಮಾನ ಹಕ್ಕುಗಳು ಸಿಗಬೇಕು ಎಂದು ನಾವು ಪ್ರತಿಪಾದಿಸುತ್ತೇವೆ. ಅಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ವಿಚಾರದಲ್ಲಿಯೂ ಇದೇ ನಮ್ಮ ನೀತಿ ಆಗಿರಲಿದೆ. ಹಾಗೆಂದು ಯಾವುದೇ ಮಿಲಿಟರಿ ಕಾರ್ಯಾಚರಣೆಗೆ ನಾವು ಬೆಂಬಲಿಸುವುದಿಲ್ಲ. ಇದೀಗ ಸ್ವಾತಂತ್ರ್ಯ ದೊರೆತಿದೆ. ಇನ್ನು ಅಫ್ಘಾನಿಸ್ತಾನೀಯರ ಯೋಗಕ್ಷೇಮದ ಬಗ್ಗೆ ಯೋಚನೆ ಮಾಡ್ತೀವಿ. ಜನರ ಬದುಕು ಸುಧಾರಿಸಲು ಶ್ರಮಿಸುತ್ತೇವೆ. ಶಾಂತಿಸ್ಥಾಪನೆ ನಮ್ಮ ಆದ್ಯತೆ. ನಮ್ಮ ಏಕತೆ, ಒಗ್ಗಟ್ಟು ಮುಖ್ಯ. ಅದಕ್ಕೆ ನಮ್ಮ ಪ್ರಾಮುಖ್ಯತೆ.

ಪ್ರ: ಅಫ್ಘಾನಿಸ್ತಾನದ ಇಂದಿನ ಪರಿಸ್ಥಿತಿಯನ್ನು ಹೇಗೆ ಗಮನಿಸುತ್ತಿದ್ದೀರಿ? ಉ: ದಿನದಿಂದ ದಿನಕ್ಕೆ ಪರಿಸ್ಥಿತಿ ಸುಧಾರಿಸುತ್ತಿದೆ. ಕಾಬೂಲ್ ನಗರದಲ್ಲಿ ಈಗ ಶಾಂತಿ ನೆಲೆಸುತ್ತಿದೆ. ವಿಮಾನ ನಿಲ್ದಾಣದಲ್ಲಿ ನಡೆದ ದುರಂತದ ಬಗ್ಗೆ ನಮಗೆ ವಿಷಾದವಿದೆ. ನಮ್ಮ ಹಲವು ಸಹಚರರು ಹುತಾತ್ಮರಾದರು. ಆದರೆ ಈ ಘಟನೆ ನಡೆದ ಸ್ಥಳದ ಭದ್ರತಾ ಉಸ್ತುವಾರಿ ಅಮೆರಿಕಕ್ಕೆ ಸೇರಿತ್ತು.

ಪ್ರ: ವಿಮಾನ ನಿಲ್ದಾಣದ ಹೊರಗಿನ ಭದ್ರತೆಯ ಜವಾಬ್ದಾರಿ ನಿಮ್ಮದು ಅಂತ ಜಗತ್ತಿಗೆ ಗೊತ್ತಿದೆ ಅಲ್ಲವೇ? ಉ: ವಿಮಾನ ನಿಲ್ದಾಣದ ಉತ್ತರ ದ್ವಾರದ ಭದ್ರತೆ ನಮ್ಮ ಜವಾಬ್ದಾರಿಯಾಗಿತ್ತು ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಸ್ಫೋಟ ನಡೆದ ಸ್ಥಳದ ಭದ್ರತೆಯ ಹೊಣೆಯನ್ನು ಅಮೆರಿಕ ವಹಿಸಿಕೊಂಡಿತ್ತು. ಸೂಕ್ತ ದಾಖಲೆಗಳಿಲ್ಲದ ಸಾವಿರಾರು ಜನರು ವಿಮಾನ ನಿಲ್ದಾಣದಲ್ಲಿ ಸೇರಿದ್ದರು. ಐಸಿಸ್-ಕೆ ಉಗ್ರರು ಪರಿಸ್ಥಿತಿಯ ದುರ್ಲಾಭ ಪಡೆದರು. ಮಾಧ್ಯಮಗಳು ಸರಿಯಾಗಿ ಅರ್ಥ ಮಾಡಿಕೊಳ್ಳದೆ ನಾವೇ ಹೊಣೆ ಎಂದು ಆರೋಪಿಸಿ, ನಮ್ಮ ವಿರುದ್ಧವೇ ಬರೆದವು.

ಪ್ರ: ಅಮೆರಿಕಕ್ಕೆ ನೀಡಿದ್ದ ಆಗಸ್ಟ್​ 31ರ ಗಡುವಿನ ಬಗ್ಗೆ ಏನು ಹೇಳ್ತೀರಿ? ಉ: ಈ ಮೊದಲೇ ಒಪ್ಪಿಕೊಂಡಿದ್ದಂತೆ ಆಗಸ್ಟ್​ 31ರ ಒಳಗೆ ಅಫ್ಘಾನಿಸ್ತಾನದಿಂದ ಅಮೆರಿಕ ಮತ್ತು ನ್ಯಾಟೊ ಪಡೆಗಳು ವಾಪಸ್ ಹೋಗಬೇಕು. ಈ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಈ ಹಿಂದೆಯೂ ಅವರು ತಮ್ಮ ಮಾತು ಉಳಿಸಿಕೊಳ್ಳಲಿಲ್ಲ. ಈ ಬಾರಿ ಹಾಗೆ ಆಗಲು ಅವಕಾಶ ಕೊಡುವುದಿಲ್ಲ. ಮುಂದಿನ ದಿನಗಳಲ್ಲಿ ಅವರು ತಾಲಿಬಾನ್​ನೊಂದಿಗೆ ಉತ್ತಮ ಸಂಬಂಧ ಇರಿಸಿಕೊಳ್ಳಲು ಬಯಸಿದರೆ, ಸ್ವಾಗತವಿದೆ.

ಪ್ರ: ವಿಮಾನ ನಿಲ್ದಾಣದಲ್ಲಿ ಗುಂಡಿನ ಹಾರಾಟ ನಿಲ್ಲುತ್ತಿಲ್ಲ ಏಕೆ? ಉ: ವಿಮಾನ ನಿಲ್ದಾಣದಲ್ಲಿ ಒಂದೇ ಸಮ ಗುಂಡಿನ ಹಾರಾಟ ನಡೆಯುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಾಗ ಅವರನ್ನು ಚೆದುರಿಸಲು ಗುಂಡು ಹಾರಿಸಬೇಕಾಗುತ್ತದೆ. ಐಸಿಸ್​ಗೆ ಸೇರಿದವರು ಯಾರನ್ನೂ ಮುಟ್ಟುತ್ತಿಲ್ಲ. ಮತ್ತೊಮ್ಮೆ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಯಬಾರದು ಎನ್ನುವ ಕಾರಣ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಲಾಗುತ್ತಿದೆ.

ಪ್ರ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿದವರಿಗೆ ಪಾಕಿಸ್ತಾನದ ಬೆಂಬಲ ಸಿಗುತ್ತಿದೆ. ಮತ್ತೊಂದೆಡೆ ಅದೇ ಪಾಕಿಸ್ತಾನ ನಿಮ್ಮನ್ನೂ ಬೆಂಬಲಿಸುತ್ತಿದೆ. ಪಾಕಿಸ್ತಾನ ವಾಸ್ತವವಾಗಿ ಯಾರ ಕಡೆಗೆ ಇದೆ? ಉ: ಪಾಕಿಸ್ತಾನ ಬೆಂಬಲಿಸುತ್ತಿದೆ ಎಂದು ಏಕೆ ಹೇಳುತ್ತಿದ್ದೀರಿ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಅಫ್ಘಾನಿಸ್ತಾನವು ಸಂಪೂರ್ಣವಾಗಿ ನಮ್ಮ ಅಧೀನಕ್ಕೆ ಬರಬೇಕು. ಇಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯ ಸಮಸ್ಯೆ ಕಾಣಿಸಿಕೊಳ್ಳಬಾರದು ಎಂದು ನಾವು ಬಯಸುತ್ತೇವೆ. ಆದರೆ ಹಿಂದಿನ ಅಧ್ಯಕ್ಷ ಅಶ್ರಫ್ ಘನಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಎಷ್ಟೋ ಗೊಂದಲಗಳಿಗೆ ಕಾರಣರಾದರು. ಸೆರೆಮನೆಗಳಿಂದ ಕೈದಿಗಳನ್ನು ಬಿಡುಗಡೆ ಮಾಡಲಾಯಿತು. ಇನ್ನೂ ಎಷ್ಟೋ ಸಂಕಷ್ಟಗಳು ಎದುರಾದವು. ಕೊನೆಗೆ ನಮ್ಮ ರಕ್ಷಣಾ ಸಿಬ್ಬಂದಿ ಕಾಬೂಲ್ ನಗರವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು.

ಪ್ರ: ಐಸಿಸ್-ಕೆ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಭಾರತದ ದೃಷ್ಟಿಯಲ್ಲಿಯೂ ಅತ್ಯಂತ ಅಪಾಯಕಾರಿ ಸಂಘಟನೆ ಅದು. ಈ ಬಗ್ಗೆ ನಿಮ್ಮ ದೃಷ್ಟಿಕೋನವೇನು? ಉ: ನಮ್ಮ ನಿಲುವು ಏನು ಎಂಬುದನ್ನು ಈ ಹಿಂದೆಯೂ ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ. ಅಫ್ಘಾನಿಸ್ತಾನದ ನೆಲವನ್ನು ಬಳಸಿಕೊಂಡು ಯಾವುದೇ ದೇಶದ ವಿರುದ್ಧ ಸಂಚು ರೂಪಿಸಲು ಅವಕಾಶ ಕೊಡುವುದಿಲ್ಲ.

ಪ್ರ: ಚೀನಾದ ವೀಘರ್ ಮುಸ್ಲಿಮರ ಬಗ್ಗೆ ನಿಮ್ಮ ನಿಲುವು ಏನಾಗಿರುತ್ತೆ? ಉ: ಅವರು ಚೀನಾ ದೇಶದ ಪ್ರಜೆಗಳು. ಚೀನಾ ದೇಶದ ಇತರೆಲ್ಲಾ ಪ್ರಜೆಗಳಿಗೆ ಏನೆಲ್ಲಾ ಸಿಗುತ್ತದೆಯೇ ಅದು ಅವರಿಗೂ ಸಿಗಬೇಕು ಎಂಬುದು ನಮ್ಮ ಅಭಿಪ್ರಾಯ.

ಪ್ರ: ಅಫ್ಘಾನಿಸ್ತಾನದ ನೆಲದಲ್ಲಿ ಅಮೆರಿಕವು ಡ್ರೋಣ್ ಸೇರಿದಂತೆ ಸಾಕಷ್ಟು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಿಟ್ಟು ಹೋಗಿದೆ. ನಿಮ್ಮ ಸುಪರ್ದಿಯಲ್ಲಿ ಅವು ಕ್ಷೇಮವಾಗಿರುತ್ತವೆ, ದುರ್ಬಳಕೆಯಾಗುವುದಿಲ್ಲ ಎಂದು ಭಾವಿಸಬಹುದೇ? ಉ: ನಮ್ಮ ಬಳಿ ಇರುವ ಆಯುಧಗಳು ಕಡಿಮೆಯೇ ಅಥವಾ ಹೆಚ್ಚೇ ಎಂಬುದು ಯೋಚಿಸಬೇಕಾದ ಪ್ರಶ್ನೆಯೇ ಅಲ್ಲ. ನಿಮ್ಮ ಬಳಿ (ಭಾರತದ ಬಳಿ) ಇರುವಷ್ಟು ಹತ್ಯಾರುಗಳು ನಮ್ಮ ಬಳಿ ಇಲ್ಲ. ನೀವು ಪ್ರತಿ ವರ್ಷ ಆಯುಧ ಖರೀದಿ, ನಿರ್ಮಾಣಕ್ಕೆಂದು ಲಕ್ಷಾಂತರ ಡಾಲರ್ ಖರ್ಚು ಮಾಡುತ್ತೀರಿ. ಇದರ ಅರ್ಥ ನೀವು ಇನ್ನೊಬ್ಬರ ಮೇಲೆ ದಾಳಿ ಮಾಡಲು ಅವನ್ನು ಬಳಸುತ್ತೀರಿ ಎಂದಲ್ಲ. ಅಮೆರಿಕನ್ನರು ಇಲ್ಲಿ ಬಿಟ್ಟುಹೋಗಿರುವ ಆಯುಧಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ, ದೇಶದ ರಕ್ಷಣೆಗಾಗಿ ಖಂಡಿತ ಬಳಸುತ್ತೇವೆ.

ಪ್ರ: ಅಫ್ಘಾನಿಸ್ತಾನದಲ್ಲಿಯೇ ಉಳಿಯುವರ ಜೀವಕ್ಕೆ ಹಾನಿ ಮಾಡುವುದಿಲ್ಲ. ಆಸ್ತಿಗೂ ಯಾವುದೇ ತೊಂದರೆಯಿಲ್ಲ ಎಂದು ಹಲವು ಬಾರಿ ನೀವು ಸ್ಪಷ್ಟಪಡಿಸಿದ್ದೀರಿ. ಆದರೂ ಜನರು ದೇಶ ಬಿಡಲು ಹಾತೊರೆಯುತ್ತಿರುವುದೇಕೆ? ಉ: ಹತ್ತಾರು ದೇಶಗಳು ತಮ್ಮ ನಾಗರಿಕರು ದೇಶ ಬಿಡಬೇಕು ಎಂದು ಸೂಚನೆ ನೀಡಿದರೆ ದೆಹಲಿಯಲ್ಲಾದರೂ ಏನಾಗಬಹುದು ಎಂದು ಯೋಚಿಸಿನೋಡಿ. ಈಗ ಕಾಬೂಲಿನಲ್ಲಾಗುತ್ತಿರುವುದೇ ಆಗ ದೆಹಲಿಯಲ್ಲಿಯೂ ಆಗುತ್ತದೆ.

ಪ್ರ: ಅಫ್ಘಾನಿಸ್ತಾನದ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಏನು ನಿರ್ಧಾರ ಮಾಡಿದ್ದೀರಿ? ಉ: ಮಹಿಳೆಯರ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಅವರಿಗೆ ಖಂಡಿತ ಶಿಕ್ಷಣ ಮತ್ತು ಉದ್ಯೋಗದ ಹಕ್ಕು ಕೊಡುತ್ತೇವೆ. ನಮ್ಮ ಆಡಳಿತ ಜಾರಿಯಾದ ನಂತರವೂ ಮಹಿಳೆಯರು ಕೆಲಸಕ್ಕೆ ಹೋಗುತ್ತಿದ್ದಾರೆ. ಬಾಲಕಿಯರು ಶಾಲೆಗಳಿಗೆ ಹೋಗಿ ಕಲಿಯುತ್ತಿದ್ದಾರೆ. ಇದು ನಮ್ಮ ನೀತಿಯ ಭಾಗವೇ ಆಗಿದೆ. ಇದರಲ್ಲಿ ವ್ಯತ್ಯಾಸ ಆಗುವುದಿಲ್ಲ. ಮಹಿಳೆಯರು ಇಸ್ಲಾಮಿ ಪದ್ಧತಿಯಂತೆ ಹಿಜಬ್ ಧರಿಸಬೇಕು ಎಂಬುದು ನಮ್ಮ ನಿಲುವು, ನಾವು ನೀಡಿರುವ ಸೂಚನೆ.

ಪ್ರ: ಪ್ರಮಾಣ ವಚನ, ಸರ್ಕಾರ ರಚನೆ ತಡವಾಗ್ತಿದೆ ಏಕೆ? ಉ: ಅಫ್ಘಾನ್ ರಾಜಕಾರಿಣಿಗಳೊಂದಿಗೆ ಸಮಾಲೋನೆ ನಡೆಸಿದ ನಂತರವೇ ಸರ್ಕಾರ ರಚಿಸಬೇಕು ಎಂದುಕೊಂಡಿದ್ದೇವೆ. ಇದೇ ಕಾರಣಕ್ಕೆ ಪ್ರಮಾಣ ವಚನ ಸ್ವೀಕಾರ ತಡವಾಗುತ್ತಿದೆ. ಸರ್ಕಾರ ರಚನೆ ಅಂತಿಮ ಹಂತದಲ್ಲಿದೆ. ಶೀಘ್ರ ಈ ಕುರಿತು ಘೋಷಣೆ ಹೊರಬೀಳಲಿದೆ.

ಪ್ರ: ಐಸಿಸ್ ಇದೀಗ ಅಫ್ಘಾನಿಸ್ತಾನದ ನೆಲದಲ್ಲಿಯೇ ನಿಮ್ಮ ವಿರುದ್ಧ ನಿಂತಿದೆ. ಅವರನ್ನು ಹೇಗೆ ತಡೆಯುತ್ತೀರಿ? ಅವರ ಸಾಮರ್ಥ್ಯವನ್ನು ಹೇಗೆ ಅಂದಾಜಿಸಿದ್ದೀರಿ? ಅವರನ್ನು ನಿಯಂತ್ರಿಸಲು ನಿಮಗೆ ಎಷ್ಟು ಸಮಯ ಬೇಕಾಗಬಹುದು? ಉ: ಇನ್​ಶಾ ಅಲ್ಲಾಹ್, ಐಸಿಸ್ ನಿಯಂತ್ರಣಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಅವರಿನ್ನೂ ಆರಂಭದ ಸ್ಥಿತಿಯಲ್ಲಿದ್ದಾರೆ. ಅವರು ಅಫ್ಘಾನಿಗಳಲ್ಲ, ವಿದೇಶೀಯರು. ಅಫ್ಘಾನಿಸ್ತಾನದಲ್ಲಿ ಬೇರುಬಿಡಲು ಆಗುವುದಿಲ್ಲ.

ಪ್ರ: ನಂಗರ್​ಹರ್​ನಲ್ಲಿ ಅಮೆರಿಕ ಬಾಂಬ್ ಹಾಕುವುದನ್ನು ಮುಂದುವರಿಸಲು ಅವಕಾಶ ಕೊಡ್ತೀರಾ? ಉ: ಅದೆಂಥದ್ದೇ ಸಮಸ್ಯೆಯಿರಲಿ. ಅಫ್ಘಾನಿಸ್ತಾನದ ವಿದ್ಯಮಾನಗಳನ್ನು ನಾವು ನಿರ್ವಹಿಸುತ್ತೇವೆ. ನಾವೇ ಬಗೆಹರಿಸಿಕೊಳ್ಳುತ್ತೇವೆ.

ಪ್ರ: ಚೀನಾ ದೇಶವು ನಿಮ್ಮ ಖನಿಜ ಸಂಪನ್ಮೂಲ, ಲೀಥಿಯಂ ಮೇಲೆ ಕಣ್ಣಿಟ್ಟಿದೆ ಎಂಬ ವರದಿಗಳು ಪ್ರಕಟವಾಗಿದೆ. ಹಲವು ದೇಶಗಳನ್ನು ಸಾಲಕೊಟ್ಟು ತನ್ನ ಅಧೀನದಲ್ಲಿ ಇರಿಸಿಕೊಂಡಿದೆ. ವ್ಯಾಪಾರವನ್ನು ಒಂದು ಗಾಳವಾಗಿ ಬಳಸುತ್ತಿದೆ. ಉ: ಅಫ್ಘಾನಿಸ್ತಾನ ಮತ್ತು ಚೀನಾ ನಡುವಣ ಸಂಬಂಧ ಹಾಳು ಮಾಡಲು ಕೆಲವರು ಯತ್ನಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಹೂಡಿಕೆ ಮಾಡಿದರೆ ಉದ್ಯೋಗ ಸಿಗುತ್ತೆ. ಅಫ್ಘಾನಿಸ್ತಾನದಲ್ಲಿ ನೈಸರ್ಗಿಕ ಸಂಪನ್ಮೂಲ ಹೇರಳವಾಗಿದೆ. ಭಾರತ ಸೇರಿದಂತೆ ಹಲವು ದೇಶಗಳು ಇಲ್ಲಿ ಹೂಡಿಕೆ ಮಾಡಿವೆ. ಅದರಿಂದ ಯಾವುದೇ ಅಪಾಯವಿಲ್ಲ.

ಪ್ರ: ನಾರ್ದರ್ನ್ ಅಲಯನ್ಸ್​ ಪ್ರತಿರೋಧದ ಬಗ್ಗೆ ಏನು ಹೇಳುತ್ತೀರಿ? ಉ: ಅವರಿಗೆ ಈವರೆಗೆ ಏನನ್ನೂ ಸಾಧಿಸಲು ಆಗಿಲ್ಲ. ಮಾತುಕತೆ ಮಾರ್ಗ ಆರಿಸಿಕೊಳ್ಳುವುದು ಅವರಿಗೇ ಒಳ್ಳೆಯದು. ಮಾತುಕತೆ ಇಂದಿಗೂ ಚಾಲ್ತಿಯಲ್ಲಿದೆ. ಪ್ರತಿರೋಧವು ಇತರ ಪ್ರದೇಶಗಳಿಗೆ ವಿಸ್ತರಿಸುವುದಿಲ್ಲ.

ಪ್ರ: ಎಷ್ಟೋ ಅಫ್ಘಾನಿಗಳು ನಿಮ್ಮ ಜೊತೆಗೆ ಇಲ್ಲ. ಅಂಥವರನ್ನು ಸರ್ಕಾರದಲ್ಲಿ ಸೇರಿಸಿಕೊಳ್ಳುವಿರಾ? ಉ: ಅಫ್ಘಾನಿಸ್ತಾನದ ಎಲ್ಲ ಸಹಭಾಗಿಗಳನ್ನು ಜೊತೆಗೆ ಸೇರಿಸಿಕೊಂಡು ಕೆಲಸ ಮಾಡ್ತೀವಿ. ನಾವು ಯಾರನ್ನೂ ವಿರೋಧಿಸುತ್ತಿಲ್ಲ. ಹಿಂದಿನ ಸರ್ಕಾರದಲ್ಲಿದ್ದ ಎಷ್ಟೋ ಸಚಿವರು, ಸಂಸದರು ಇಂಥವರೇ ಆಗಿದ್ದಾರೆ. ನಮ್ಮನ್ನು ಅವರು ಒಪ್ಪುತ್ತಿಲ್ಲ. ಹಾಗೆಂದು ಅವರ ಜೀವ ಜೀವ, ಆಸ್ತಿಯ ಬಗ್ಗೆ ತೊಂದರೆಯಿಲ್ಲ ಎಂದು ಹೇಳಿದ್ದೇವೆ. ಅಫ್ಘಾನಿಸ್ತಾನದ ಪುನರ್​ನಿರ್ಮಾಣಕ್ಕೆ ಅವರ ಸಹಾಯ ಪಡೆದುಕೊಳ್ಳುತ್ತೇವೆ.

ಪ್ರ: ಆಗಸ್ಟ್​ 31ರ ನಂತರವೂ ಆಫ್ಘಾನಿಸ್ತಾನದಲ್ಲಿ ಉಳಿದುಕೊಳ್ಳುವವರ ಬಗ್ಗೆ ನಿಮ್ಮ ನಿಲುವು ಏನು? ಉ: ಕಾನೂನು ಸಮ್ಮತ ಪಾಸ್​ಪೋರ್ಟ್​ ಇರುವವರು ಯಾವಾಗ ಬೇಕಾದರೂ ವಾಣಿಜ್ಯ ವಿಮಾನಗಳ ಮೂಲಕ ತಮ್ಮ ದೇಶಗಳಿಗೆ ಹೋಗಬಹುದು. ನಾವು ತೊಂದರೆ ಕೊಡುವುದಿಲ್ಲ.

(Our Stand on India Depends on How it Reacts to Afghanistan Development)

ಇದನ್ನೂ ಓದಿ: ಭಾರತದೊಂದಿಗೆ ಸಂಬಂಧ ಬೆಳೆಸುವ ಇಂಗಿತ ವ್ಯಕ್ತಪಡಿಸಿದ ತಾಲಿಬಾನ್​; ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ ಹೇಳಿಕೆ

ಇದನ್ನೂ ಓದಿ: Afghanistan: ತಾಲಿಬಾನ್ ವಶದಲ್ಲಿದೆ ಆಧುನಿಕ ಶಸ್ತ್ರಾಸ್ತ್ರಗಳು; ಅವುಗಳು ಯಾವುವು? ಬಳಕೆ ಹೇಗೆ? ಭಾರತಕ್ಕೆ ಏನು ಹಾನಿ?

Published On - 5:49 pm, Sun, 29 August 21

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್