ಎರಡು ಮಹಾಯುದ್ಧಗಳನ್ನ ಕಂಡ ಜಗತ್ತು, ಈಗ 3ನೇ ವಿಶ್ವಯುದ್ಧಕ್ಕೆ ಅಣಿಯಾಗುವ ಕಾಲ ಬಂದುಬಿಟ್ಟಿದೆ. ಮೊದಲ 2 ಮಹಾಯುದ್ಧಗಳು ಯುರೋಪ್ನಿಂದ ಆರಂಭವಾಗಿದ್ದರೆ, ಈ ಬಾರಿ ಇದು ಭಿನ್ನವಾಗುವ ಸಾಧ್ಯತೆ ಇದೆ. ಅಮೆರಿಕ ಹಾಗೂ ಇರಾನ್ ನಡುವಿನ ಸೇಡು ಸ್ಫೋಟಗೊಂಡಿದ್ದು, ಎಲ್ಲೆಲ್ಲೂ 3ನೇ ಮಹಾಯುದ್ಧದ ಭೀತಿ ಕಾಡತೊಡಗಿದೆ.
ಭಾರತದ ಮೇಲೂ ಬೀರಲಿದೆ ಪ್ರಭಾವ!
ಅಮೆರಿಕ, ಇರಾನ್ ನಡುವಿನ ಘಟನೆ ಬೆನ್ನಲ್ಲೇ ತೈಲಬೆಲೆಯಲ್ಲಿ ನಿನ್ನೆ ಗಣನೀಯ ಏರಿಕೆಯಾಗಿದೆ. ಪರಿಸ್ಥಿತಿ ಸೂಕ್ಷ್ಮವಾಗಿರೋ ಕಾರಣ ಹೆಚ್ಚಿನ ಪಡೆಗಳನ್ನು ಅಮೆರಿಕ ಗಲ್ಫ್ ರಾಷ್ಟ್ರಗಳಿಗೆ ರವಾನಿಸಿದೆ. ಮಿತ್ರ ರಾಷ್ಟ್ರಗಳಿರುವ ಕಡೆ ಅಮೆರಿಕ ಹೆಚ್ಚಿನ ಪಡೆ ಕಳಿಸಿದ್ದು, ಇದು ಯುದ್ಧ ಭೀತಿ ಸೃಷ್ಟಿಸಿದೆ. ಇದೇ ಕಾರಣಕ್ಕೆ ತೈಲ ಬಿಕ್ಕಟ್ಟು ಉಂಟಾಗಿದ್ದು, ಕಚ್ಚಾತೈಲ ಬೆಲೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಏರಿಕೆಯಾಗುವ ಸಂಭವವಿದೆ. ಇದರ ಪರಿಣಾಮವನ್ನು ಭಾರತದ ವಾಹನ ಸವಾರರು ಎದುರಿಸಬೇಕಾದ ಸಂದಿಗ್ಧ ಸ್ಥಿತಿ ಎದುರಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲಿ ಭಾರಿ ಏರಿಕೆಯಾಗುವ ಸಂಭವವಿದೆ.
ಇರಾನ್ ಕಮಾಂಡರ್ ಹತ್ಯೆಗೈದು ಸಂಭ್ರಮಿಸಿದ ‘ದೊಡ್ಡಣ್ಣ’!
ಇರಾಕ್ ಅಕ್ಷರಶಃ ಕೆಂಡದುಂಡೆಯಾಗಿದೆ. ಅಮೆರಿಕ ದಾಳಿ, ಸದ್ದಾಂ ಹುಸೈನ್ ಸಾವಿನ ಬಳಿಕ ಹೊತ್ತಿ ಉರಿದ ಇರಾಕ್ನಲ್ಲಿ ಸದ್ಯದ ಮಟ್ಟಿಗೆ ಒಂದಷ್ಟು ಶಾಂತಿ ಮೂಡಿತ್ತು. ಆದ್ರೆ ಮತ್ತೆ ಶುರುವಾಗಿರುವ ಅಂತರಿಕ ಯುದ್ಧ ಹಾಗೂ ಹಿಂಸೆ ಮತ್ತೆ ದೇಶವನ್ನ ಹಳಿ ತಪ್ಪುವಂತೆ ಮಾಡಿದೆ. ಆದರೆ ಇರಾಕ್ನಲ್ಲಿ ಮೂಡಿರುವ ಈ ಅಶಾಂತ ವಾತಾವರಣದಲ್ಲಿ ಬೇಳೆ ಬೇಯಿಸಿಕೊಳ್ಳಲು ಬಲಿಷ್ಠ ರಾಷ್ಟ್ರಗಳು ಪಟ್ಟು ಹಾಕ್ತಿದ್ದು, ಈ ಪಟ್ಟಿಯಲ್ಲಿ ಇರಾನ್ ಮತ್ತು ಅಮೆರಿಕವೂ ಸೇರಿದೆ. ಇನ್ನೂ ಮೊನ್ನೆ ಮೊನ್ನೆ ನಡೆದಿದ್ದ ಘಟನೆಗೆ ನಿನ್ನೆ ಸೇಡು ತೀರಿಸಿಕೊಂಡಿರುವ ಅಮೆರಿಕ, ಇರಾನ್ ಕುದ್ಸ್ ಫೋರ್ಸ್ನ ಮುಖ್ಯಸ್ಥ ಖಾಸಿಮ್ ಸುಲೇಮನ್ನನ್ನು ಹತ್ಯೆಗೈದಿದೆ.
ಜಗತ್ತಿನಾದ್ಯಂತ 3ನೇ ವಿಶ್ವಯುದ್ಧದ ಭೀತಿ!
ಡಿ.27ರಂದು ಇರಾಕ್ನ ಅಮೆರಿಕ ಮಿಲಿಟರಿ ಬೇಸ್ ಮೇಲೆ ದಾಳಿ ನಡೆದ ನಂತರ ಒಬ್ಬರಿಗೊಬ್ಬರು ಹಲ್ಲು ಮಸೆಯತೊಡಗಿದ್ದರು. ಅಮೆರಿಕ ಕೂಡ ಪ್ರತಿದಾಳಿ ಮಾಡಿ 25 ಉಗ್ರರನ್ನ ಕೊಂದು ಹಾಕಿತ್ತು. ಆದ್ರೆ ಅದ್ಯಾವಾಗ ಇರಾನ್ ಅಮೆರಿಕದ ರಾಯಭಾರ ಕಚೇರಿಯ ಮೇಲೆ ಕೈ ಇಡ್ತೋ, ಅಲ್ಲಿಂದ ದೊಡ್ಡ ಪ್ರತಿಕಾರಕ್ಕೆ ಅಮೆರಿಕ್ಕೆ ಸಜ್ಜಾಗಿತ್ತು. ಡಿ.31ರಂದು ಉದ್ರಿಕ್ತರು ಇರಾಕ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿಮಾಡಿದ್ದರು. ಘಟನೆ ಬಳಿಕ ಸೇಡು ತೀರಿಸಿಕೊಳ್ಳುವುದಾಗಿ ಟ್ರಂಪ್ ಘೋಷಿಸಿದ್ದರು. ಅದನ್ನ ನಿನ್ನೆಯೇ ಈಡೇರಿಸಿಕೊಂಡಿದ್ದಾರೆ.ಈ ಬೆಳವಣಿಗೆ ಜಗತ್ತಿನಾದ್ಯಂತ 3ನೇ ವಿಶ್ವಯುದ್ಧದ ಭೀತಿ ಹುಟ್ಟುಹಾಕಿದೆ.
ಒಟ್ನಲ್ಲಿ ಹಿಟ್ಲರ್ನ ಆವೇಶ ಮತ್ತು ತಪ್ಪು ನಿರ್ಧಾರಗಳಿಂದ ಮೊಳಗಿದ 2ನೇ ಮಹಾಯುದ್ಧ ಮತ್ತೊಮ್ಮೆ ಎಲ್ಲರ ಕಣ್ಮುಂದೆ ಸರಿದು ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ. ಅಮೆರಿಕ ದಾಳಿ ಮಾಡಿದ್ದಕ್ಕೆ ಒಳಗೊಳಗೆ ಕುದಿಯುತ್ತಿರುವ ಇರಾನ್, ಯಾವ ಸಮಯದಲ್ಲಾದರೂ ಜ್ವಾಲಾಮುಖಿಯಂತೆ ಸ್ಫೋಟಗೊಳ್ಳಬಹುದು. ತನ್ನ ನೆರೆ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಅಟ್ಯಾಕ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿಯೇ, ಅಮೆರಿಕ ಹೈಅಲರ್ಟ್ ಘೋಷಿಸಿದ್ದು, ತನ್ನ ಪ್ರಜೆಗಳಿಗೆ ಈ ಕೂಡಲೇ ಇರಾನ್ ತೊರೆಯುವಂತೆ ಹೇಳಿದೆ. ಅದೇನೆ ಇರಲಿ ವಿಶ್ವದ 2 ಬಲಿಷ್ಠ ರಾಷ್ಟ್ರಗಳು ತಮ್ಮ ಜಿದ್ದಿಗಾಗಿ ಕಾದಾಡ್ತಾ ಇದ್ರೆ, ಇನ್ನುಳಿದ ದೇಶಗಳು ಸಂಕಷ್ಟಕ್ಕೆ ಸಿಲುಕುತ್ತಿರುವುದು ದುರಂತವೇ ಸರಿ.
Published On - 11:19 am, Sat, 4 January 20