
ಬ್ಯಾಂಕಾಕ್, ಜುಲೈ 13:ಥೈಲೆಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ ಸೋಮವಾರ ಬೆಳಗಿನ ಜಾವ ಭೀಕರ ದುರಂತವೊಂದು ಸಂಭವಿಸಿದೆ. ಅಲ್ಲಿನ ಅತ್ಯಂತ ಜನಪ್ರಿಯ ಪಬ್ವೊಂದರಲ್ಲಿ ಮಧ್ಯರಾತ್ರಿ ಆಕಸ್ಮಿಕವಾಗಿ ಕಾಣಿಸಿಕೊಂಡ ಭಾರಿ ಬೆಂಕಿ(Fire) ಮತ್ತು ವಿಷಕಾರಿ ಹೊಗೆಯೊಳಗೆ ಸಿಲುಕಿ ಕನಿಷ್ಠ 27 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಹರಿದಾಡುತ್ತಿವೆ. ನೈಟ್‌ಕ್ಲಬ್‌ನ ಮುಖ್ಯ ಬಾಗಿಲಿನಿಂದ ರಕ್ಕಸ ಜ್ವಾಲೆಗಳು ಮತ್ತು ದಟ್ಟವಾದ ಕಪ್ಪು ಹೊಗೆ ಆಕಾಶ ಮುಟ್ಟುತ್ತಿರುವುದು ಹಾಗೂ ಪ್ರಾಣ ಉಳಿಸಿಕೊಳ್ಳಲು ಯುವಕ-ಯುವತಿಯರು ದಿಕ್ಕಾಪಾಲಾಗಿ ಓಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬ್ಯಾಂಕಾಕ್‌ನ ಚತುಚಕ್ ಜಿಲ್ಲೆಯ ಉತ್ತರ ಭಾಗದಲ್ಲಿರುವ ‘ನಾ ಲಾಡ್‌ಪ್ರಾವ್’ ಪಬ್‌ನಲ್ಲಿ ಈ ಕರಾಳ ಘಟನೆ ನಡೆದಿದೆ. ಮಧ್ಯರಾತ್ರಿ ಪಬ್ ಸಡಗರದಿಂದ ಕೂಡಿದ್ದಾಗ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಕತ್ತಲ ಕೋಣೆಯಂತಿದ್ದ ಪಬ್‌ನೊಳಗೆ ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕಟ್ಟಡವನ್ನು ಆವರಿಸಿಕೊಂಡಿದೆ.
ಉಸಿರುಗಟ್ಟಿಸುವ ದಟ್ಟ ಹೊಗೆಯಿಂದ ಪಾರಾಗಲು ದಾರಿ ತಿಳಿಯದ ಗ್ರಾಹಕರು, ಪ್ರಾಣ ಉಳಿಸಿಕೊಳ್ಳಲು ಪಬ್‌ನ ಹಿಂಭಾಗದಲ್ಲಿದ್ದ ಶೌಚಾಲಯ ಮತ್ತು ಸ್ನಾನಗೃಹಗಳ ಒಳಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದಾರೆ. ಆದರೆ, ದುರಂತವೆಂದರೆ ಆ ಕಿರಿದಾದ ಜಾಗಕ್ಕೂ ವಿಷಕಾರಿ ಹೊಗೆ ತಲುಪಿದ್ದರಿಂದ, ಬಹುತೇಕ ಬಲಿಪಶುಗಳು ಅಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಥಾಯ್ ಪ್ರಧಾನಿ ಅನುಟಿನ್ ಚಾರ್ನ್‌ವಿರಕುಲ್ ಅತ್ಯಂತ ಭಾವುಕರಾಗಿ ತಿಳಿಸಿದ್ದಾರೆ.
ಮಧ್ಯರಾತ್ರಿ ಸುಮಾರು 12 ಗಂಟೆಗೆ ಅಗ್ನಿಶಾಮಕ ದಳಕ್ಕೆ ಕರೆ ಬಂದ ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದವು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕೇವಲ 30 ನಿಮಿಷಗಳಲ್ಲೇ ಬೆಂಕಿಯನ್ನು ನಿಯಂತ್ರಣಕ್ಕೆ ತಂದರಾದರೂ, ಅಷ್ಟರಲ್ಲೇ ಇಡೀ ಪಬ್ ಸುಟ್ಟು ಕರಕಲಾಗಿತ್ತು.
ಮತ್ತಷ್ಟು ಓದಿ: ಲಕ್ನೋ ಕೋಚಿಂಗ್ ಸೆಂಟರ್ನಲ್ಲಿ ಭೀಕರ ಬೆಂಕಿ ದುರಂತ; ಕಿಟಕಿಯಿಂದ ಹಾರಿದ ವಿದ್ಯಾರ್ಥಿಗಳು
ಪಬ್‌ನಲ್ಲಿ ಲೈವ್ ಮ್ಯೂಸಿಕ್ ಪ್ರದರ್ಶನ ನೀಡುತ್ತಿದ್ದ ಗಾಯಕನೊಬ್ಬ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ವೇದಿಕೆಯ ಪಕ್ಕದಲ್ಲಿದ್ದ ಮೇನ್ ಸರ್ಕ್ಯೂಟ್ ಬ್ರೇಕರ್‌ನಿಂದ ಮೊದಲು ಸಣ್ಣದಾಗಿ ಹೊಗೆ ಬರುತ್ತಿರುವುದು ಕಂಡುಬಂದಿದೆ. ಮರುಕ್ಷಣದಲ್ಲೇ ಇಡೀ ಪಬ್‌ನ ವಿದ್ಯುತ್ ಸಂಪರ್ಕ ಕಡಿತಗೊಂಡು ದೊಡ್ಡ ಸ್ಫೋಟದ ಶಬ್ದ ಕೇಳಿಸಿದೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ಇಡೀ ಜಾಗ ಕಪ್ಪು ಹೊಗೆಯಿಂದ ತುಂಬಿಹೋಗಿತ್ತು ಎಂದು ಆತ ಭೀತಿಯಿಂದ ಹೇಳಿದ್ದಾನೆ.
ಥೈಲ್ಯಾಂಡ್‌ನ ನೈಟ್‌ಕ್ಲಬ್‌ಗಳಲ್ಲಿ ಇಂತಹ ಭೀಕರ ಅಗ್ನಿ ದುರಂತಗಳು ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸುರಕ್ಷತಾ ನಿಯಮಗಳ ನಿರ್ಲಕ್ಷ್ಯದಿಂದಾಗಿ ನೂರಾರು ಜೀವಗಳು ಬಲಿಯಾಗಿವೆ.
2022ರ ಮ್ಯೂಸಿಕ್ ಪಬ್ ದುರಂತ: ಥೈಲ್ಯಾಂಡ್‌ನ ಪೂರ್ವ ಭಾಗದ ಮ್ಯೂಸಿಕ್ ಪಬ್ ಒಂದರಲ್ಲಿ ನಡೆದ ಅಗ್ನಿ ಅವಘಡದಲ್ಲಿ 14 ಯುವಕರು ಮೃತಪಟ್ಟಿದ್ದರು.
2009ರ ಸಂತಿಕಾ ನೈಟ್‌ಕ್ಲಬ್ : ಜಾಗತಿಕವಾಗಿ ಸದ್ದು ಮಾಡಿದ್ದ ಈ ದುರಂತ ಜನವರಿ 1, 2009 ರ ಹೊಸ ವರ್ಷದ ಪಾರ್ಟಿ ವೇಳೆ ನಡೆದಿತ್ತು. ಕ್ಲಬ್ ಒಳಗಡೆ ಇನ್ಡೋರ್ ಪಟಾಕಿ ಹಾರಿಸಿದ ಕಾರಣ ಇಡೀ ಕಟ್ಟಡಕ್ಕೆ ಬೆಂಕಿ ಬಿದ್ದು 66 ಜನರು ಸಾವನ್ನಪ್ಪಿದ್ದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಯಾವುದೇ ಒಳಾಂಗಣ ಪಬ್ ಅಥವಾ ಕ್ಲಬ್‌ಗಳಲ್ಲಿ ತುರ್ತು ನಿರ್ಗಮನ ದ್ವಾರಗಳು ಮತ್ತು ಅಗ್ನಿಶಾಮಕ ಉಪಕರಣಗಳು ಕಡ್ಡಾಯವಾಗಿ ಇರಬೇಕು ಎಂಬ ನಿಯಮವಿದ್ದರೂ, ಇವುಗಳನ್ನು ಗಾಳಿಗೆ ತೂರುತ್ತಿರುವುದರಿಂದಲೇ ಇಂತಹ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಸದ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:14 am, Mon, 13 July 26