AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದ ಶೂ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ದುರಂತ; 28 ಜನ ಸಜೀವ ದಹನ

ಚೀನಾದ ಫುಜಿಯನ್ ಪ್ರಾಂತ್ಯದ ಶೂ ಕಾರ್ಖಾನೆಯೊಂದರಲ್ಲಿ ಗುರುವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಇಡೀ ಕಟ್ಟಡ ಭಸ್ಮವಾಗಿದೆ. ಈ ಭೀಕರ ಬೆಂಕಿಯ ಅವಘಡದಲ್ಲಿ ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ. ಚೀನಾದ ತುರ್ತು ನಿರ್ವಹಣಾ ಸಚಿವಾಲಯವು ರಕ್ಷಣಾ ಕಾರ್ಯಾಚರಣೆ ನಡೆಸಲು ಘಟನಾ ಸ್ಥಳಕ್ಕೆ ತಜ್ಞ ರಕ್ಷಣಾ ಸಿಬ್ಬಂದಿಯ ತಂಡವನ್ನು ಕಳುಹಿಸಿದೆ. ಸ್ಥಳದಲ್ಲಿ ರಕ್ಷಣಾ ಮತ್ತು ಅಗ್ನಿಶಾಮಕ ಕಾರ್ಯಾಚರಣೆಗಳು ಇನ್ನೂ ಮುಂದುವರಿದಿವೆ ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ತಿಳಿಸಿದೆ.

ಚೀನಾದ ಶೂ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ದುರಂತ; 28 ಜನ ಸಜೀವ ದಹನ
China Shoe Factory Fire Tragedy
ಸುಷ್ಮಾ ಚಕ್ರೆ
|

Updated on: Jul 09, 2026 | 11:17 PM

Share

ಜಿಂಜಿಯಾಂಗ್, ಜುಲೈ 9: ಚೀನಾದ ಫುಜಿಯನ್ ಪ್ರಾಂತ್ಯದ ಜಿಂಜಿಯಾಂಗ್ ನಗರದಲ್ಲಿ ಇಂದು ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ(Fire Tragedy)  28 ಜನರು ಸಜೀವ ದಹನವಾಗಿದ್ದಾರೆ. ಶೂ ಫ್ಯಾಕ್ಟರಿಯಲ್ಲಿ ಈ ಅವಘಡ ಸಂಭವಿಸಿದೆ. ಇಡೀ ಕಟ್ಟಡವನ್ನು ಬೆಂಕಿ ಆವರಿಸಿಕೊಂಡಿರುವಾಗ ಪ್ರಾಣ ಉಳಿಸಿಕೊಳ್ಳಲು ಕಾರ್ಮಿಕರು ದಿಕ್ಕಾಪಾಲಾಗಿ ಓಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಹೊತ್ತಿ ಉರಿದ ಬಹುಮಹಡಿ ಕಟ್ಟಡ:

ವೈರಲ್ ಆಗಿರುವ ವಿಡಿಯೋ ಕ್ಲಿಪ್‌ಗಳಲ್ಲಿ ಜಿಂಜಿಯಾಂಗ್ ನಗರದ ಬಹುಮಹಡಿ ಕಟ್ಟಡವೊಂದು ಸಂಪೂರ್ಣವಾಗಿ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿರುವುದು ಕಂಡುಬಂದಿದೆ. ಕಟ್ಟಡದ ಹಲವು ಮಹಡಿಗಳಿಂದ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮುತ್ತಿದ್ದು, ಬೆಂಕಿ ಅತ್ಯಂತ ವೇಗವಾಗಿ ಇಡೀ ರಚನೆಗೆ ಆವರಿಸಿಕೊಂಡಿದೆ. ಬೆಂಕಿ ನಂದಿಸಿದ ನಂತರದ ದೃಶ್ಯಗಳಲ್ಲಿ ಕಟ್ಟಡದ ಹೊರಗಿನ ಗೋಡೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇಲ್ಲಿನ ಪ್ರಸಿದ್ಧ ‘ಹ್ಯುಟೆಂಗ್’ ಶೂ ಕಂಪನಿಗೆ ಸೇರಿದ ಫ್ಯಾಕ್ಟರಿಯಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಇಷ್ಟೊಂದು ಭೀಕರವಾಗಿ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: ಬಸ್–ಟ್ರಕ್ ಡಿಕ್ಕಿ ವೇಳೆ ಬೆಂಕಿ ಹೊತ್ತಿಕೊಂಡು 8 ಮಂದಿ ಸಾವು, 22ಕ್ಕೂ ಹೆಚ್ಚು ಮಂದಿಗೆ ಗಾಯ

28 ಜನರ ಸಾವು, 213 ಜನರ ರಕ್ಷಣೆ:

ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಕಟ್ಟಡದ ಒಳಗೆ 237 ಕಾರ್ಮಿಕರು ಮತ್ತು ಇಬ್ಬರು ವಿಸಿಟರ್​​ಗಳು ಇದ್ದರು. ಘಟನಾ ಸ್ಥಳಕ್ಕೆ ಧಾವಿಸಿದ ತುರ್ತು ರಕ್ಷಣಾ ತಂಡಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ 213 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಆದರೆ, 28 ಜನರು ಒಳಗೇ ಸುಟ್ಟು ಕರಕಲಾಗಿದ್ದಾರೆ.

ಫ್ಯಾಕ್ಟರಿ ಮಾಲೀಕನ ಬಂಧನ:

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಗಾಯಗೊಂಡವರಿಗೆ ಸಂಪೂರ್ಣ ವೈದ್ಯಕೀಯ ನೆರವು ನೀಡಲು ಮತ್ತು ವಿವರವಾದ ತನಿಖೆ ನಡೆಸಲು ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಅಧಿಕಾರಿಗಳು ತಕ್ಷಣದ ಕ್ರಮ ಕೈಗೊಂಡಿದ್ದು, ಫ್ಯಾಕ್ಟರಿ ಮಾಲೀಕ ಹಾಗೂ ಕಂಪನಿಯ ಇತರ ಉನ್ನತ ಅಧಿಕಾರಿಗಳನ್ನು ಬಂಧಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us