ಶೇಖ್ ಹಸೀನಾ ಪಲಾಯನಕ್ಕೆ ಕಾರಣವಾದ ವಿದ್ಯಾರ್ಥಿ ನಾಯಕ ನಹಿದ್ ಇಸ್ಲಾಂ ಕುರಿತ 7 ಸಂಗತಿಗಳಿವು

|

Updated on: Aug 06, 2024 | 5:14 PM

Bangladesh Crisis: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಸರ್ಕಾರಿ ಉದ್ಯೋಗಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಿಗೆ ನೀಡುವ ಮೀಸಲಾತಿಯನ್ನು ಹೆಚ್ಚಿಸಿದ ನಂತರ ತೀವ್ರ ಟೀಕೆಗೆ ತುತ್ತಾದರು. ಸ್ವಾತಂತ್ರ್ಯ ಹೋರಾಟ ನಡೆದು ಸುಮಾರು 50 ವರ್ಷಗಳಾದರೂ ಇನ್ನೂ ಆ ಕುಟುಂಬಸ್ಥರಿಗೆ ಮೀಸಲಾತಿ ನೀಡುವುದು ನಿರುದ್ಯೋಗಿ ಯುವಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತಳೆದಿದ್ದರಿಂದ ಆ ಆಕ್ರೋಶ ಪ್ರತಿಭಟನೆಯ ರೂಪ ತಾಳಿತು. ಈ ಪ್ರತಿಭಟನೆಯ ರೂವಾರಿ ನಹಿದ್ ಇಸ್ಲಾಂ ಎಂಬ ಯುವಕ.

ಶೇಖ್ ಹಸೀನಾ ಪಲಾಯನಕ್ಕೆ ಕಾರಣವಾದ ವಿದ್ಯಾರ್ಥಿ ನಾಯಕ ನಹಿದ್ ಇಸ್ಲಾಂ ಕುರಿತ 7 ಸಂಗತಿಗಳಿವು
ನಹಿದ್ ಇಸ್ಲಾಂ
Follow us on

ಢಾಕಾ: 26 ವರ್ಷ ವಯಸ್ಸಿನ ಸಮಾಜಶಾಸ್ತ್ರ ವಿದ್ಯಾರ್ಥಿ ನಾಯಕ ನಹಿದ್ ಇಸ್ಲಾಂ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ವಿರುದ್ಧ ನಡೆದ ಪ್ರತಿಭಟನೆಯ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಸರ್ಕಾರಿ ಉದ್ಯೋಗಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕೋಟಾವನ್ನು ಹೆಚ್ಚಿಸಿದ ನಂತರ ಶೇಖ್ ಹಸೀನಾ ಅವರನ್ನು ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸಲಾಯಿತು. ಸರ್ಕಾರದ ಈ ನಿರ್ಧಾರ ನಿರುದ್ಯೋಗಿ ಯುವಕರಲ್ಲಿ ಭಾರೀ ಅಸಮಾಧಾನ ಸೃಷ್ಟಿಸಿತ್ತು.

ಶೇಖ್ ಹಸೀನಾ ಸೋಮವಾರ ಸಂಜೆ ಭಾರತಕ್ಕೆ ಬಂದಿಳಿದಿದ್ದಾರೆ ಮತ್ತು ರಾಜಕೀಯ ಆಶ್ರಯಕ್ಕಾಗಿ ಯುನೈಟೆಡ್ ಕಿಂಗ್‌ಡಮ್‌ಗೆ ತೆರಳಲು ಯೋಜಿಸುತ್ತಿದ್ದಾರೆ. ಲಂಡನ್‌ಗೆ ತೆರಳುವ ಮುನ್ನ ಆಕೆ ಭಾರತದಲ್ಲಿ ಒಂದು ಅಥವಾ ಎರಡು ರಾತ್ರಿ ಕಳೆಯುವ ಸಾಧ್ಯತೆ ಇದೆ. ನಿನ್ನೆ, ಎನ್‌ಎಸ್‌ಎ ಅಜಿತ್ ದೋವಲ್ ಅವರನ್ನು ಹಿಂಡನ್ ಏರ್‌ಫೋರ್ಸ್ ಬೇಸ್‌ನಲ್ಲಿ ಭೇಟಿಯಾದರು. ಅದರ ನಂತರ ನರೇಂದ್ರ ಮೋದಿ ನಿವಾಸದಲ್ಲಿ ನಡೆದ ಭದ್ರತೆಯ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ ಪ್ರಧಾನಿ ಮೋದಿಯವರಿಗೆ ಪರಿಸ್ಥಿತಿಯ ಬಗ್ಗೆ ವಿವರಿಸಿದರು.

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ನಹಿದ್ ಇಸ್ಲಾಂ ಬಗ್ಗೆ 7 ಕುತೂಹಲಕಾರಿ ಅಂಶಗಳು ಇಲ್ಲಿವೆ:

  1. ಶೇಖ್ ಹಸೀನಾ ಅವರನ್ನು ದೇಶದಿಂದ ಹೊರಹಾಕಲು ಕಾರಣವಾದ ಮೀಸಲಾತಿ ವಿರುದ್ಧದ ವಿದ್ಯಾರ್ಥಿ ಚಳವಳಿಯ ಸಂಯೋಜಕ ನಹಿದ್ ಇಸ್ಲಾಂ.
  2. ಜುಲೈ ಮಧ್ಯದಲ್ಲಿ ನಹಿದ್ ಇಸ್ಲಾಂನನ್ನು ಪೊಲೀಸರು ಬಂಧಿಸಿದರು. ಅಂದಿನಿಂದ ಅವರು ಬಾಂಗ್ಲಾದಲ್ಲಿ ಪ್ರಸಿದ್ಧಿ ಪಡೆದರು.
  3. ಬಾಂಗ್ಲಾದೇಶದಲ್ಲಿ ಅಶಾಂತಿ ಕಡಿಮೆಯಾಗುತ್ತಿದ್ದಂತೆ, ನಹಿದ್ ಇಸ್ಲಾಂ ಮಿಲಿಟರಿ ಆಡಳಿತದ ಯಾವುದೇ ಸಾಧ್ಯತೆಯನ್ನು ಅಥವಾ ಮಿಲಿಟರಿಯಿಂದ ಬೆಂಬಲಿತವಾದ ಯಾವುದೇ ಸರ್ಕಾರವನ್ನು ತಿರಸ್ಕರಿಸಿದ್ದಾರೆ.
  4. ಹಿಂದೂ ಸಮುದಾಯ ಸೇರಿದಂತೆ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹ ವಿದ್ಯಾರ್ಥಿಗಳಿಗೆ ನಹಿದ್ ಇಸ್ಲಾಂ ಕರೆ ನೀಡಿದರು.
  5. ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ವಿರುದ್ಧ ಸಿಡಿದೆದ್ದಿರುವ ನಹಿದ್ ಇಸ್ಲಾಂ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 1998ರಲ್ಲಿ ಜನಿಸಿದರು. ಅವರಿಗೆ ವಿವಾಹವಾಗಿದ್ದು, ತಮ್ಮ ಕೂಡ ಇದ್ದಾರೆ. ಅವರ ತಾಯಿ ಗೃಹಿಣಿ ಮತ್ತು ತಂದೆ ಶಿಕ್ಷಕ.
  6. ಜುಲೈನಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ, ನಹಿದ್ ಇಸ್ಲಾಂನನ್ನು ಬಂಧಿಸಲಾಯಿತು. ಅವರು ಪ್ರಜ್ಞೆ ಕಳೆದುಕೊಳ್ಳುವವರೆಗೂ ಪೋಲೀಸರು ಚಿತ್ರಹಿಂಸೆ ನೀಡಿದರು. ನಂತರ ಆತನನ್ನು ರಸ್ತೆಯಲ್ಲಿ ಬಿಸಾಡಲಾಗಿತ್ತು. ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ನಹಿದ್​ಗೆ ಭಾರೀ ಬೆಂಬಲ ವ್ಯಕ್ತವಾಯಿತು.
  7. ವಿದ್ಯಾರ್ಥಿ ನಾಯಕನಾಗಿ, ನಹಿದ್ ಮಾನವ ಹಕ್ಕುಗಳನ್ನು ರಕ್ಷಿಸುವ ಕೆಲಸಕ್ಕಾಗಿ ಜನಪ್ರಿಯರಾಗಿದ್ದಾರೆ. ಬಾಂಗ್ಲಾದೇಶವು ಶೇ. 30ರಷ್ಟು ಕೋಟಾವನ್ನು ಮರುಸ್ಥಾಪಿಸಿದ ನಂತರ, ನಹಿದ್ ಭಾಗವಾಗಿದ್ದ ವಿದ್ಯಾರ್ಥಿ ಚಳವಳಿಯು ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಕೋಟಾ ವ್ಯವಸ್ಥೆಯನ್ನು ಸುಧಾರಿಸಲು ಕರೆ ನೀಡಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ